ನವದೆಹಲಿ, ಡಿ.21 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರ ತಿಂಗಳ ರೇಡಿಯೋ ಕಾರ್ಯಕ್ರಮವಾದ ಮನ್ ಕೀ ಬಾತ್ ಡಿ.27ರಂದು ನಡೆಯಲಿದ್ದು, ಈ ವೇಳೆ ಅವರ ಭಾಷಣ ಮುಗಿಯುವ ತನಕ ಊಟದ ತಟ್ಟೆಯನ್ನು ಹಿಡಿದು ಬಾರಿಸಬೇಕು" ಎಂದು ಭಾರತೀಯ ಕಿಸಾನ್ ಯೂನಿಯನ್ನ ಜಗಜಿತ್ ಸಿಂಗ್ ಹೇಳಿದ್ದಾರೆ.
"ಡಿ.25 ರಿಂದ ಡಿ.27 ರವರೆಗೆ ಹರಿಯಾಣದ ಟೋಲ್ ಪ್ಲಾಝಾದಲ್ಲಿ ಮುತ್ತಿಗೆ ಹಾಕಲು ತೀರ್ಮಾನ ಕೈಗೊಂಡಿದ್ದೇವೆ. ಡಿ.23ರಂದು ಕಿಸಾನ್ ದಿವಸವನ್ನು ಆಚರಣೆ ಮಾಡಲಾಗುತ್ತದೆ. ಆದರೆ, ಈ ಬಾರಿ ಕಿಸಾನ್ ದಿವಸವನ್ನು ಆಚರಣೆ ಮಾಡದಿರಲು ತೀರ್ಮಾನ ಮಾಡಲಾಗಿದೆ" ಎಂದು ಯೂನಿಯನ್ ಹೇಳಿದೆ.
ಸ್ವಾರಾಜ್ ಇಂಡಿಯಾ ಪಕ್ಷದ ನಾಯಕ ಯೋಗೆಂದ್ರ ಯಾದವ್ ಮಾತನಾಡಿ, "ನಾವು ನಾಳೆ ಒಂದು ದಿನ ರೈತರಿಗೆ ಬೆಂಬಲ ಸೂಚಿಸಿ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ. ರೈತರ ಪ್ರತಿಭಟನೆಯು ಎಲ್ಲೆಲ್ಲಿ ನಡೆಯುತ್ತದೆಯೋ ಅಲ್ಲೆಲ್ಲಾ ನಾವು ಉಪವಾಸ ಸತ್ಯಾಗ್ರಹ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆ ದೇಶದಾದ್ಯಂತ ಲಾಕ್ಡೌನ್ ಹೇರಲಾಗಿದ್ದ ವೇಳೆ ವೈದ್ಯರಿಗೆ ಗೌರವ ಸಲ್ಲಿಸುವ ಸಲುವಾಗಿ ದೇಶದ ನಾಗರಿಕರು ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆಯಬೇಕು ಹಾಗೂ ತಟ್ಟೆಯಿಂದ ಶಬ್ಧ ಮಾಡಬೇಕು ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಕರೆ ನೀಡಿದ್ದರು.