ಉಡುಪಿ, ಡಿ. 20 (DaijiworldNews/SM): ಹಿಂದೂ ಸಮಾಜದಲ್ಲಿದ್ದ ಅಸೃಶ್ಯತೆಯನ್ನು ನಿವಾರಿಸಿ ಸಶಕ್ತ ಸದೃಢಗೊಳಿಸುವ ನಿಮಿತ್ತ ದೇಶದ ಹಲವೆಡೆ ದಲಿತರ ಕಾಲೊನಿಗಳಿಗೆ ಭೇಟಿ ನೀಡಿ ಕ್ರಾಂತಿ ಕಾರ್ಯ ನಡೆಸಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಂಚಲನ ಮೂಡಿಸಿದ್ದರು. ಇದೀಗ ಅವರ ಶಿಷ್ಯ ಶ್ರೀವಿಶ್ವಪ್ರಸನ್ನ ತೀರ್ಥರೂ ಗುರುಗಿನ ದಾರಿಯಲ್ಲಿ ಹೆಜ್ಜೆ ಹಾಕುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ಭಾನುವಾರ ಉಡುಪಿಯ ಕೊಡವೂರು ಗ್ರಾಮದ ಪಾಳೆಕಟ್ಟೆ ಎಂಬಲ್ಲಿ ಪರಿಶಿಷ್ಟರ ಬಡಾವಣೆಗೆ ತಮ್ಮ ಮೊದಲ ಭೇಟಿ ನೀಡಿ ಹಿಂದೂ ಸಮಾಜ ಸಂಘಟನೆಗೆ ತಾವೂ ಸಿದ್ಧ ಎಂದಿದ್ದಾರೆ.
ಅಯೋಧ್ಯೆ ರಾಮ ಮಂದಿರ ನಿರ್ಮಾಣವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಭಾರತದಲ್ಲಿ ಹಿಂದೂ ಸಮಾಜವನ್ನು ಸಂಘಟನಾತ್ಮಕವಾಗಿ ಸಶಕ್ತ ಮತ್ತು ಸುದೃಢಗೊಳಿಸಬೇಕಾಗಿದೆ. ಈ ಆಶಯದೊಂದಿಗೆ ಸುಮಾರು 120 ಮನೆಗಳನ್ನು ಹೊಂದಿರುವ ಈ ಬಡಾವಣೆಗೆ ಭೇಟಿ ನೀಡಿ 400ರಷ್ಟು ದಲಿತ ಬಂಧುಗಳಲ್ಲಿ ಹಿಂದವಃ ಸೋದರಾ ಸರ್ವೇ ಎಂಬ ಗುರು ವಿಶ್ವೇಶತೀರ್ಥರ ಸಂದೇಶದಂತೆ ವಿಶ್ವಾಸ ತುಂಬಿದರು.
ಶ್ರೀಗಳು ಆಗಮಿಸುವ ಬಗ್ಗೆ ಸ್ಥಳೀಯ ನಗರಸಭಾ ಸದಸ್ಯ ಮತ್ತು ಸಂಘ ಪರಿವಾರದ ಸ್ವಯಂ ಸೇವಕ ವಿಜಯ ಪೂಜಾರಿ ಮತ್ತು ಶ್ರೀಗಳ ಆಪ್ತರಾಗಿರುವ ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಎರಡು ದಿನಗಳ ಮೊದಲೇ ಕಾಲೊನಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದರು. ಅದರಂತೆ ಉತ್ಸಾಹ ಮತ್ತು ಸಂತೋಷದಿಂದ ನಿವಾಸಿಗಳು ಕಾಲೊನಿಯ ರಸ್ತೆಗಳಲ್ಲಿ ತಳಿರು ತೋರಣ ರಂಗೋಲಿ ಹಾಕಿ ಸಿಂಗರಿಸಿದ್ದರು. ಸಾಮೂಹಿಕ ಭಜನೆಯೊಂದಿಗೆ ಶ್ರೀಗಳನ್ನು ಬರಮಾಡಿಕೊಂಡರು.