ಬೆಂಗಳೂರು, ಡಿ.20 (DaijiworldNews/PY): "ಈ ಬಾರಿ ಪಂಚಾಯತ್ಗಳಲ್ಲಿ ಬಿಜೆಪಿ ಶೇ.80ರಷ್ಟು ಅಧಿಕಾರ ಪಡೆಯುವುದು ಖಚಿತ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬೆಂಗಳೂರಿನಲ್ಲಿ ರಾಜ್ಯ ಪದಾಧಿಕಾರಿಗಳ ಸಭೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಬಿಜೆಪಿ ಬೆಂಬಲಿತರು ಗ್ರಾಮ ಪಂಚಾಯತ್ಗಳಲ್ಲಿ ಅಧಿಕ ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವುದು ಪಕ್ಷವು ಗರಿಷ್ಠ ಸ್ಥಾನ ಪಡೆಯುವುದರ ಮುನ್ಸೂಚನೆ ಆಗಿದೆ" ಎಂದರು.
"ಯುವ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಮುಖೇನ ಸಂಘಟನಾತ್ಮಕವಾಗಿ ಪಕ್ಷ ಸಧೃಢವಾಗಿದೆ. ರಾಜ್ಯದಲ್ಲಿ ಸುಮಾರು 1,16,000 ಕಾರ್ಯಕರ್ತರಿಗೆ ಪಕ್ಷವು ವಿವಿಧ ಜವಾಬ್ದಾರಿಯನ್ನು ವಹಿಸಿದೆ. ಶೇ.60ಕ್ಕಿಂತ ಅಧಿಕ ಯುವಕರನ್ನೇ ಪಂಚಾಯತ್ಗಳಲ್ಲಿ ಕಣಕ್ಕಿಳಿಸಲು ಸಾಧ್ಯವಾಗಿದೆ" ಎಂದು ಹೇಳಿದರು.
"ಫಸಲ್ ಬಿಮಾ, ಕಿಸಾನ್ ಸಮ್ಮಾನ್ ಸೇರಿ ಅತ್ಯುತ್ತಮ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಕೇಂದ್ರ ಸರ್ಕಾರ ರೈತಪರ ಎನ್ನುವುದನ್ನು ಸಾಬೀತುಪಡಿಸಿದೆ. ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಜನಪರವಾದ ಹಾಗೂ ರೈತರಪರವಾದ ಕಾರ್ಯಕ್ರಮಗಳ ವಿಚಾರವನ್ನು ಜನತೆಗೆ ತಿಳಿಸುವ ಕೆಲಸ ಮಾಡಬೇಕು" ಎಂದರು.