ಬೆಂಗಳೂರು, ಡಿ.20 (DaijiworldNews/PY): "ಮಕ್ಕಳ ಹಿತದೃಷ್ಟಿಯ ಹಿನ್ನೆಲೆ ಸರ್ಕಾರ ಜ.1ರಿಂದ ಶಾಲೆ ಹಾಗೂ ವಿದ್ಯಾಗಮ ಪ್ರಾರಂಭದ ತೀರ್ಮಾನವನ್ನು ಕೈಗೊಂಡಿದ್ದು, ಈ ಕಾರ್ಯ ಯಶಸ್ವಿಯಾಗಬೇಕೆಂದರೆ ಪೋಷಕರ, ಶಾಲಾ ಅಭಿವೃದ್ಧಿ ಸಮಿತಿಗಳ ಮತ್ತು ಶಿಕ್ಷಕರ ಸಮನ್ವಯ ಮತ್ತು ಪೂರ್ಣ ಸಹಕಾರ ಅಗತ್ಯ. ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಒಮ್ಮೆ ಯೋಚಿಸಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಕು" ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು, "ಇದು ಅತ್ಯಂತ ಸದುದ್ದೇಶದಿಂದ ಮತ್ತು ಸದ್ಭಾವನೆಯಿಂದ ಕೈಗೊಂಡಿರುವ, ಹಾಗೂ ಅತಿ ಅಗತ್ಯ ವಿದ್ದ ನಿರ್ಣಯ. ಈ ಕಾರ್ಯ ಯಶಸ್ವಿಯಾಗಬೇಕೆಂದರೆ ಪೋಷಕರ, ಶಾಲಾ ಅಭಿವೃದ್ಧಿ ಸಮಿತಿ ಗಳ ಮತ್ತು ಶಿಕ್ಷಕರ ಸಮನ್ವಯ ಮತ್ತು ಪೂರ್ಣ ಸಹಕಾರ ಅಗತ್ಯ. ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಒಮ್ಮೆ ಯೋಚಿಸಿ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕೆಂದು ನನ್ನ ಆಗ್ರಹ" ಎಂದಿದ್ದಾರೆ.
"2020ರ ಎಸ್ಸೆಸೆಲ್ಸಿ ಪರೀಕ್ಷೆಯ ಪರೀಕ್ಷಾ ಕೇಂದ್ರಗಳಿಂದ ಹೇಗೆ ಸೋಂಕು ಹರಡದಂತೆ ನೋಡಿಕೊಂಡಿದ್ದೆವೋ, ಅದೇ ರೀತಿ ಈಗ ಶಾಲೆಗಳಿಂದ ಸೋಂಕು ಬರದಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಸರ್ಕಾರದ ವಿವಿಧ ಇಲಾಖೆಗಳ ಸಹಕಾರ ನಮಗಿದೆ.ಎಸ್ಸೆಸ್ಸೆಲ್ಸಿ ಪರೀಕ್ಷಾ ಸಂದರ್ಭದಲ್ಲಿ ಆ ನಮ್ಮ ವಿದ್ಯಾರ್ಥಿಗಳು ನಡೆದುಕೊಂಡ ರೀತಿ ಇಡೀ ರಾಜ್ಯಕ್ಕೇ ಮಾದರಿಯಾಗಿತ್ತು. ಅದೇ ರೀತಿ ಈಗ ನಮ್ಮ ಎಸ್ಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ವರ್ತಿಸುವ ಅಗತ್ಯವಿದೆ. ಎಸ್ಸೆಸೆಲ್ಸಿ ಮತ್ತು ಎರಡನೇ ಪಿಯುಸಿ ವಿದ್ಯಾರ್ಥಿಗಳಿಗೆ ಯಾವುದೇ ಹೊರೆಯಾಗದಂತೆ, ಯಾವುದೇ ಒತ್ತಡ ಅವರ ಮೇಲೆ ಬೀಳದಂತೆ, ಆದರೆ ಅವರ ಕಲಿಕೆಗೆ ಲೋಪವಾಗದಂತೆ ಸಿಲಬಸ್ ಅನ್ನು ರಚಿಸಿ ಇನ್ನು ಒಂದು ವಾರದ ಒಳಗೆ ಪ್ರಕಟ ಮಾಡಲಾಗುತ್ತದೆ" ಎಂದು ತಿಳಿಸಿದ್ದಾರೆ.
"ಶಾಲೆಗಳನ್ನು ಆರಂಭಿಸುತ್ತಿರುವುದು ಒಂದು ದೊಡ್ಡ ಸವಾಲು. ಕಳೆದ ಜೂನ್ - ಜುಲೈ ತಿಂಗಳುಗಳಲ್ಲಿ ನಡೆದ ಎಸ್ಸೆಸೆಲ್ಸಿ ಪರೀಕ್ಷೆಗಳೂ ಒಂದು ದೊಡ್ಡ ಸವಾಲಾಗಿದ್ದವು. ಆದರೆ ಆಗ ನಮ್ಮ ಎಲ್ಲ ಜನಪ್ರತಿನಿಧಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ನೀಡಿದ ಸಹಕಾರದಿಂದ ದೊಡ್ಡ ಸವಾಲನ್ನು ಎದುರಿಸಲು ಸಾಧ್ಯವಾಯಿತು. ಅದೇ ರೀತಿ ಈಗಿನ ಶಾಲೆಗಳನ್ನು ನಡೆಸುವ ಸವಾಲನ್ನೂ ಸಹ ಯಶಸ್ವಿಯಾಗಿ ಎದುರಿಸಲು ಜನಪ್ರತಿನಿಧಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಎಲ್ಲಾ ಸಹಕಾರ ನೀಡುತ್ತಾರೆಂಬುದು ನನ್ನ ನಂಬಿಕೆ" ಎಂದು ಹೇಳಿದ್ದಾರೆ.
"ಎಸ್ಸೆಸೆಲ್ಸಿ ಪರೀಕ್ಷೆಗಳು ನಡೆದಾಗ ನಾಡಿನ ಎಲ್ಲಾ ಪತ್ರಿಕೆಗಳು ಹಾಗೂ ಸುದ್ದಿ ಚಾನೆಲ್ಗಳು ನೀಡಿದ ಬೆಂಬಲ ಮರೆಯುವಂತಿಲ್ಲ. ನಮ್ಮ ಮಕ್ಕಳ ಆರೋಗ್ಯ ಹಾಗೂ ಅವರ ಶೈಕ್ಷಣಿಕ ಭವಿಷ್ಯ ಎರಡನ್ನು ಜೊತೆಜೊತೆಯಾಗಿ ಇಂದು ಜೋಪಾನವಾಗಿ ಗಮನಿಸಿ ಅಗತ್ಯ ವ್ಯವಸ್ಥೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ಕಾರ್ಯ ಯಶಸ್ವಿಯಾಗಲು ಎಲ್ಲರ ಸಹಕಾರ ಸಹಾಯ ಕೋರುತ್ತೇನೆ" ಎಂದು ಬರೆದುಕೊಂಡಿದ್ದಾರೆ.