ಮುಂಬೈ, ಡಿ.20 (DaijiworldNews/PY): "ಹೊಸ ಕೃಷಿ ಕಾಯ್ದೆಗಳ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ಚರ್ಚೆಯನ್ನು ತಪ್ಪಿಸುವ ಸಲುವಾಗಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದು ಮಾಡಲಾಗಿದೆ" ಎಂದು ಶಿವಸೇನಾ ಸಂಸದ ಸಂಯ್ ರಾವತ್ ಹೇಳಿದ್ದಾರೆ.
ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಕೇಳಿರುವ ಅವರು, "ರೈತರ ಹೋರಾಟಕ್ಕೆ ಸಂಬಂಧಿಸಿದ ಚರ್ಚೆ ಹಾಗೂ ಸಂಸತ್ತಿನ ಅಧಿವೇಶನ ನಡೆಸಲು ಆಸಕ್ತಿ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಅವರು, ಸೆಂಟ್ರಲ್ ವಿಸ್ತಾ ಯೋಜನೆಗೆ ಒಂದು ಸಾವಿರ ಕೋಟಿ ರೂ ವೆಚ್ಚ ಮಾಡುವಂತ ಅವಶ್ಯಕತೆ ಏನಿತ್ತು?" ಎಂದು ಕೇಳಿದ್ದಾರೆ.
ಹೊಸ ಸಂಸತ್ತು ಕಟ್ಟಡ ನಿರ್ಮಾಣದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ಸದ್ಯ ಇರುವ ಸಂಸತ್ ಅಧಿವೇಶನ ಉತ್ತಮವಾಗಿತ್ತು. ಅದರಲ್ಲಿ 50-70 ವರ್ಷಗಳ ಕಾಲ ಕಾರ್ಯನಿರ್ವಹಿಸಬಹುದಾಗಿತ್ತು. ನೂತನ ಸಂಸತ್ತು ಭವನದ ನಿರ್ಮಾಣದಿಂದ ಹಿಂದಿನ ನಾಯಕರ ಪರಂಪರೆ ಹಾಗೂ ನೆನಪುಗಳು ನಾಶವಾಗುತ್ತವೆ ಎನ್ನುವ ಬಗ್ಗೆ ಯೋಚನೆ ಇಲ್ಲ" ಎಂದಿದ್ದಾರೆ.
"ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ದ ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಯ್ದೆಗಳನ್ನು ನಿಷೇಧ ಮಾಡಲು ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದು ಮಾಡಲಾಗಿದೆ" ಎಂದು ತಿಳಿಸಿದ್ದಾರೆ.