ಬೆಂಗಳೂರು, ಡಿ.20 (DaijiworldNews/PY): "ಖಾಸಗಿ ಶಾಲೆಗಳು ನಿಗದಿತ ಪೂರ್ಣಶುಲ್ಕ ಪಾವತಿಗೆ ಒತ್ತಡ ಹೇರುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಖಾಸಗಿ ಶಾಲೆಗಳು ನಿಗದಿತ ಪೂರ್ಣಶುಲ್ಕ ಪಾವತಿಗೆ ಒತ್ತಡ ಹೇರುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಶುಲ್ಕ ಪಾವತಿಸದಿದ್ದರೆ ಆನ್ಲೈನ್ ತರಗತಿ ಸ್ಥಗಿತಗೊಳಿಸಿ ಖಾಸಗಿ ಶಾಲೆಗಳು ಬ್ಲಾಕ್ಮೇಲ್ ಮಾಡಿದ್ದವು. ತರಗತಿಯೇ ನಡೆಯದಿದ್ದರೂ ಲೈಬ್ರರಿ, ಲ್ಯಾಬೋರೇಟರಿ ಹಾಗೂ ಪಠ್ಯೇತರ ಶುಲ್ಕ ಪಾವತಿಸುವಂತೆ ಪೋಷಕರಿಗೆ ಒತ್ತಡ ಹಾಕುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದ್ದಾರೆ.
"ಖಾಸಗಿ ಶಾಲೆಗಳ ಶುಲ್ಕದಾಹಕ್ಕೆ ಕಡಿವಾಣ ಹಾಕದಿದ್ದರೆ ಅದು ಸರ್ಕಾರದ ವೈಫಲ್ಯ. ಕಡಿವಾಣ ಹಾಕದಿದ್ದರೆ ಸರ್ಕಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣವಿಲ್ಲವೆಂತಲೂ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಸರ್ಕಾರ ಮಣಿದಿದೆ ಎಂದರ್ಥ. ಶಿಕ್ಷಣ ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಿ ಪೋಷಕರ ರಕ್ಷಣೆಗೆ ನಿಲ್ಲಬೇಕಿದೆ" ಎಂದು ಒತ್ತಾಯಿಸಿದ್ದಾರೆ.