ಹತ್ರಸ್, ಡಿ.20 (DaijiworldNews/MB) : ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹತ್ರಸ್ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ. ಸಂತ್ರಸ್ತೆಯ ಹೇಳಿಕೆ ಪಡೆಯಲು ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಲು ತಡ ಮಾಡಿರುವುದೇ ಪ್ರಮುಖ ಸಾಕ್ಷ್ಯದ ನಾಶಕ್ಕೆ ಕಾರಣವಾಗಿದೆ ಎಂದು ಈ ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
ಯುವತಿಯು ಸೆ.22ರಂದು ತನ್ನದೇ ಊರಿನ ನಾಲ್ವರು ಯುವಕರು ಈ ಕೃತ್ಯ ಎಸಗಿಸಿರುವ ಬಗ್ಗೆ ಹೇಳಿಕೆ ನೀಡಿದ್ದು, ಆ ಆರೋಪಿಗಳ ಹೆಸರನ್ನು ಕೂಡಾ ಹೇಳಿದ್ದಳು. ಆದರೆ ಯುವತಿ ಅತ್ಯಾಚಾರಕ್ಕೆ ಒಳಗಾದ ಪ್ರದೇಶದಿಂದ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ದಾಖಲಿಸಲು ಪೊಲೀಸರು ತಡ ಮಾಡಿದ್ದಾರೆ. ಈ ಕಾರಣದಿಂದಾಗಿ ಸಾಕ್ಷ್ಯ ನಾಶವಾಗಿದೆ ಎಂದು ಸಿಬಿಐನ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹತ್ರಾಸ್ನ ಹಿರಿಯ ಪೊಲೀಸ್ ಅಧಿಕಾರಿ, ''ಪೊಲೀಸರು ಈ ಪ್ರಕರಣವನ್ನು ತೀರಾ ಬೇಜಾವ್ದಾರಿಯಿಂದ ನಿರ್ವಹಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ತಿಳಿದ ತಕ್ಷಣವೇ ಎಸ್ಪಿ ಸೇರಿ ಐವರು ಪೊಲೀಸರನ್ನು ವಜಾ ಮಾಡಲಾಗಿದೆ. ಯುವತಿಯ ಹೇಳಿಕೆ ಪಡೆದ ಕೂಡಲೇ ಆರೋಪಿಗಳನ್ನು ಬಂಧಿಸಿದ್ದೇವೆ. ತನಿಖೆಯು ಸರಿಯಾದ ರೀತಿಯಲ್ಲೇ ನಡೆಸಿದ್ದೇವೆ'' ಎಂದು ಹೇಳಿದ್ದಾರೆ.