ನವದಹೆಲಿ, ಡಿ.20 (DaijiworldNews/PY): "ಡಿ.25 ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಉತ್ತರ ಪ್ರದೇಶ ರೈತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಲಿದ್ದಾರೆ" ಎಂದು ಬಿಜೆಪಿ ತಿಳಿಸಿದೆ.
ಬಿಜೆಪಿ ಪಕ್ಷ ಶನಿವಾರ ಪ್ರಕಟಣೆ ಬಿಡುಗಡೆ ಮಾಡಿದ್ದು, ಉತ್ತರ ಪ್ರದೇಶದ 2500ಕ್ಕೂ ಅಧಿಕ ಸ್ಥಳಗಳಲ್ಲಿ ಕಿಸಾನ್ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದಿದೆ.
ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಬಿಜೆಪಿ ಘಟಕದ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಅವರು, ರಾಜ್ಯದ ವಿವಿಧ ಪ್ರದೇಶಗಳ ಪಕ್ಷದ ಪದಾಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ್ದು, "ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಡವರಿಗೆ ಹಾಗೂ ರೈತರಿಗೆ ಸಮರ್ಪಿತವಾಗಿದೆ" ಎಂದಿದ್ದಾರೆ.
"ವಿರೋಧ ಪಕ್ಷಗಳು ಹೊಸ ಕೃಷಿ ಕಾಯ್ದೆಗಳಿಗೆ ಸಂಬಂಧಪಟ್ಟಂತೆ ಸುಳ್ಳು ಹೇಳುತ್ತಿವೆ. ಮೋದಿ ಸರ್ಕಾರವು ಮಾಡಿದ ಕ್ಷೇಮಾಭಿವೃದ್ದಿಯನ್ನು ಈ ಹಿಂದೆಯೇ ಮಾಡಿದ್ದರೆ, ಪ್ರಸ್ತುತ ರೈತರ ಸ್ಥಿತಿ ಉತ್ತಮವಾಗಿರುತ್ತಿತ್ತು" ಎಂದು ತಿಳಿಸಿದ್ದಾರೆ.