ಶ್ರೀನಗರ, ಡಿ.20 (DaijiworldNews/PY): "ಜಾರಿ ನಿರ್ದೇಶನಾಲಯವು ನನ್ನ ತಂದೆ ಫಾರೂಕ್ ಅಬ್ದುಲ್ಲಾ ಅವರಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಿದ್ದು, ಈ ಕ್ರಮಕ್ಕೆ ಯಾವುದೇ ರೀತಿಯಾದ ಸಮರ್ಥನೆ ಇಲ್ಲ" ಎಂದು ಫಾರೂಕ್ ಅಬ್ದುಲ್ಲಾ ಅವರ ಪುತ್ರ ಉಮರ್ ಅಬ್ದುಲ್ಲಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇಡಿ ಜಪ್ತಿ ಮಾಡಿದ ಆಸ್ತಿಗಳಲ್ಲಿ ಹೆಚ್ಚಿನವು ಪಿತ್ರಾರ್ಜಿತವಾಗಿವೆ. ಇವುಗಳನ್ನು 1970ರಿಂದ ಖರೀದಿ ಮಾಡಲಾಗಿದ್ದು, 2003ರಲ್ಲಿ ಒಂದು ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ನಮ್ಮ ಕಡೆಯಿಂದ ಯಾವುದೋ ಅಕ್ರಮ ನಡೆದಿದೆ ಎನ್ನುವ ಕಾರಣ ನೀಡಿ ಆಸ್ತಿ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಸಮರ್ಥನೆ ನೀಡುವಲ್ಲಿ ಇಡಿ ವಿಫಲಾಗಿದೆ" ಎಂದಿದ್ದಾರೆ.
"ಈ ವಿಚಾರವಾಗಿ ನನ್ನ ತಂದೆ ವಕೀಲರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡುತ್ತೇವೆ. ಕೋರ್ಟ್ನಲ್ಲಿ ನಿಷ್ಪಕ್ಷಪಾತವಾದ ವಿಚಾರಣೆ ನಡೆಯಲಿದೆ. ಈ ಹೋರಾಟದಲ್ಲಿ ಗೆಲುವು ಸಿಗುವ ಸಾಧ್ಯತೆ ಕೂಡಾ ಇದೆ" ಎಂದು ಹೇಳಿದ್ದಾರೆ.
"ಆಸ್ತಿ ಜಪ್ತಿ ಮಾಡುವ ಮೊದಲು ಇಡಿ ನೀಡುವಂತ ಅಧಿಕೃತ ನೋಟಿಸ್ ನನ್ನ ತಂದೆಗೆ ಸಿಗುವ ಮೊದಲೇ, ಈ ವಿಷಯ ಮಾಧ್ಯಮಗಳಿಗೆ ತಿಳಿದಿದೆ. ಈ ಬಗ್ಗೆ ನನ್ನ ತಂದೆ ಗಮನಿಸಿದ್ದಾರೆ" ಎಂದು ತಿಳಿಸಿದ್ದಾರೆ.
"ಯಾರಿಗೂ ಕೂಡಾ ನಾನು ತಲೆ ಬಾಗುವುದಿಲ್ಲ. ತನ್ನ ಕಾರ್ಯವನ್ನು ಇಡಿ ಮಾಡಲಿ. ನಾನು ನನ್ನ ಕೆಲಸ ಮಾಡುತ್ತೇನೆ" ಎಂದಿದ್ದಾರೆ.
ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಯಲ್ಲಿ ಅಕ್ರಮ ಹಣ ಸಾಗಣೆ ಆರೋಪದಲ್ಲಿ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹಾಗೂ ಇತರರಿಗೆ ಸೇರಿದ 11.86 ಕೋಟಿ.ರೂ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.