ಕಾನ್ಪುರ, ಡಿ.20 (DaijiworldNews/MB) : ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾದ ಉನ್ನಾವೊದ ಭಾರತೀಯ ಜನತಾ ಪಕ್ಷದ ಸಂಸದ ಸಾಕ್ಷಿ ಮಹಾರಾಜ್ ಈಗ "ಪಾಕಿಸ್ತಾನಕ್ಕಿಂತ ಭಾರತದಲ್ಲಿ ಹೆಚ್ಚಿನ ಮುಸ್ಲಿಮರು ಇರುವುದರಿಂದ ಅವರ ಅಲ್ಪಸಂಖ್ಯಾತ ಸ್ಥಾನಮಾನವನ್ನು ರದ್ದುಗೊಳಿಸಬೇಕು" ಎಂದು ಹೇಳಿದ್ದಾರೆ.
ಶನಿವಾರ ಉನ್ನಾವೊದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಪಾಕಿಸ್ತಾನಕ್ಕಿಂತ ಭಾರತದಲ್ಲಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇದೆ. ಆದ್ದರಿಂದ ಮುಸ್ಲಿಮರ ಅಲ್ಪಸಂಖ್ಯಾತ ಸ್ಥಾನಮಾನವನ್ನು ತಕ್ಷಣದಿಂದಲೇ ರದ್ದುಗೊಳಿಸಬೇಕು. ಮುಸ್ಲಿಮರು ಈಗ ತಮ್ಮನ್ನು ಹಿಂದೂಗಳ ಕಿರಿಯ ಸಹೋದರರೆಂದು ಪರಿಗಣಿಸಿ ಅವರೊಂದಿಗೆ ದೇಶದಲ್ಲಿ ವಾಸಿಸಬೇಕು" ಎಂದರು.
ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಕುರಿತು ಮಾತನಾಡಿದ ಸಾಕ್ಷಿ, "ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಶೀಘ್ರದಲ್ಲೇ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲಾಗುವುದು. ಎರಡು ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ವಂಚಿತರಾಗುತ್ತಾರೆ" ಎಂದು ಹೇಳಿದರು.
ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು, ''ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು. "ಕೃಷಿ ಕಾನೂನುಗಳ ಬಗ್ಗೆ ಮಾತನಾಡಲು ಸರ್ಕಾರ ಸಿದ್ಧವಾಗಿದೆ" ಎಂದು ಹೇಳಿದರು.
''ರಾಮ ಮಂದಿರದ ವಿಚಾರದಂತೆ ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಕೃಷಿ ಮಸೂದೆಯ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಬದಲಿಗೆ ಅವರು ಮುಗ್ಧ ರೈತರನ್ನು ಬಲಿ ಪಡೆಯುತ್ತಿದ್ದಾರೆ'' ಎಂದು ದೂರಿದರು.