ಚಂಡೀಗಡ, ಡಿ.20 (DaijiworldNews/PY): ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ಕೃಷಿ ಕಾಯ್ದೆಗಳ ವಿರುದ್ದವಾಗಿ ದೆಹಲಿ ಹಾಗೂ ಹರಿಯಾಣ ಗಡಿ ಪ್ರದೇಶಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಬಿರೇಂದರ್ ಸಿಂಗ್ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, "ನೂತನ ಕೃಷಿ ಕಾಯ್ದೆಗಳಿಂದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ವಿಚಾರವಾಗಿ ರೈತರು ಭೀತಿಗೊಳಗಾಗಿದ್ದಾರೆ. ರೈತರ ಹೋರಾಟದ ಜೊತೆ ನಿಲ್ಲುವುದು ನನ್ನ ನೈತಿಕ ಜವಾಬ್ದಾರಿ" ಎಂದು ಹೇಳಿದ್ದಾರೆ.
"ನಾನು ರಾಜಕಾರಣದಲ್ಲಿ ಏನೇ ಸಾಧನೆ ಮಾಡಿದ್ದರೂ ಸರ್ ಛೋಟು ರಾಮ್ ಅವರ ಮೊಮ್ಮಗನಾಗಿರದಿದ್ದರೆ ಆಗುತ್ತಿರಲಿಲ್ಲ. ಹಾಗಾಗಿ ರೈತರ ಹೋರಾಟದಲ್ಲಿ ರೈತರೊಂದಿಗೆ ನಿಲ್ಲುವುದು ನನ್ನ ನೈತಿಕ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಾನು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ" ಎಂದಿದ್ದಾರೆ.
ಈ ವೇಳೆ, ದೆಹಲಿಯ ಗಡಿಯಲ್ಲಿರುವ ಹರಿಯಾಣದ ಜಿಲ್ಲೆಯಲ್ಲಿನ ತಮ್ಮ ಬೆಂಬಲಿಗರೊಂದಿಗೆ ಕೂಡಲೇ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ರೈತರ ಹಿತಾಸಕ್ತಿಗೋಸ್ಕರ ಹೋರಾಟ ನಡೆಸಿದ್ದ ರಾಜಕಾರಣಿ ಸರ್.ಛೋಟು ರಾಮ್ ಅವರ ಮೊಮ್ಮಗ ಬಿರೇಂದರ್ ಸಿಂಗ್. ಇವರ ಪುತ್ರ ಬ್ರಿಜೇಂದ್ರ ಸಿಂಗ್ ಅವರೂ ಕೂಡಾ ಬಿಜೆಪಿ ಸದಸ್ಯರಾಗಿದ್ದಾರೆ. ಕಳೆದ ಜನವರಿಯಲ್ಲಿ ಬಿರೇಂದರ್ ಸಿಂಗ್ ಅವರು ರಾಜ್ಯ ಸಭೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.