ಕೊಲ್ಕತ್ತಾ, ಡಿ.20 (DaijiworldNews/MB) : "ದೀದಿ ಕುಟುಂಬದ ಯಾರೂ ಮುಖ್ಯಮಂತ್ರಿಯಾಗಲು ಬಯಸಿಲ್ಲ" ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಬಿಜೆಪಿಗೆ ತಿರುಗೇಟು ನೀಡಿದೆ.
ಶನಿವಾರ ಬಿಜೆಪಿಗೆ ಪಕ್ಷಾಂತರಗೊಂಡ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಸ್ವಜನ ಪಕ್ಷಪಾತ ಮಿತಿಮೀರಿದೆ ಎಂದು ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ ಟಿಎಂಸಿ, ''ಅಧಿಕಾರಿ ವಂಶ ಪಾರಂಪರ್ಯ ರಾಜಕೀಯಕ್ಕೆ ಅಂಟಿಕೊಂಡಿಲ್ಲವೇ ಎಂದು ಪ್ರಶ್ನಿಸಿದೆ. ಹಾಗೆಯೇ ಅಧಿಕಾರಿಯ ತಂದೆ, ಸಹೋದರಿ, ಸಹೋದರ ಸಂಸದರಾಗಿದ್ದಾರೆ. ಮತ್ತೊಬ್ಬ ಸಹೋದರ ಸೌಮೇದು ಅಧಿಕಾರಿ ಪಾಲಿಕೆ ಅಧ್ಯಕ್ಷ'' ಎಂದು ಹೇಳಿದೆ.
''ಇನ್ನು ಜನತೆಯ ಪ್ರೀತಿಯಿಂದ ಮಮತಾ ಬ್ಯಾನರ್ಜಿ ಬಂಗಾಳದ ಮುಖ್ಯಮಂತ್ರಿಯಾಗಿದ್ದು ಅವರು ರಾತ್ರೋರಾತ್ರಿ ಸಿಎಂ ಆಗಿಲ್ಲ. ನಾಲ್ಕೂವರೆ ದಶಕಗಳ ಕಾಲ ಬೀದಿಯಲ್ಲಿದ್ದು, ಜನರ ಹಕ್ಕುಗಳ ಬಗ್ಗೆ ಮಾತನಾಡಿ ಜನರ ಪರವಾಗಿ ಹೋರಾಡಿದ್ದರು. ಆ ನಿಟ್ಟಿನಲ್ಲಿ ಬಂಗಾಳದ ಜನತೆ ಅವರನ್ನು ಸಿಎಂ ಮಾಡಿದ್ದಾರೆ'' ಎಂದು ಹೇಳಿದೆ.
''ಸುಳ್ಳಿನ ಕಂತೆ ದೀದಿ ಸರ್ಕಾರದ ಕೆಲಸ ಮತ್ತು ಅಭಿವೃದ್ದಿಯಿಂದ ವಿಮುಖವಾಗಲ್ಲ'' ಎಂದು ಕೂಡಾ ಹೇಳಿದೆ.
ಹಾಗೆಯೇ ''ಜಯ್ ಶಾ ಅವರು ಕೇಂದ್ರ ಗೃಹ ಸಚಿವರ ಪುತ್ರ ಎಂಬುದನ್ನು ಹೊರತುಪಡಿಸಿ ಅವರು ಬಿಸಿಸಿಐನ ಕಾರ್ಯದರ್ಶಿಯಾಗಲು ಯಾವ ಅರ್ಹತೆಯಿದೆ'' ಎಂದು ಪಕ್ಷದ ವಕ್ತಾರ ಕಲ್ಯಾಣ್ ಬ್ಯಾನರ್ಜಿ ಕೇಳಿದ್ದಾರೆ.