ಬೆಂಗಳೂರು, ಡಿ.20 (DaijiworldNews/PY): "ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿನ ಈಗಿನ ಬಿಕ್ಕಟ್ಟಿಗೆ ಸಿಎಂ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ನೇರ ಹೊಣೆಗಾರರು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರಾಜ್ಯ ಸರ್ಕಾರದ ಎಡಬಿಡಂಗಿ ನಿಲುವುಗಳಿಂದಾಗಿ ವಿದ್ಯಾರ್ಥಿಗಳು, ಪೋಷಕರು ಮತ್ತು ಖಾಸಗಿ ಶಾಲೆಗಳ ಮಾಲೀಕರು ಎಲ್ಲರೂ ಬೀದಿಗಿಳಿದಿದ್ದಾರೆ. ಸಿಎಂ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಕ್ಷಣ ಸ್ಪಷ್ಟನಿರ್ಧಾರ ಕೈಗೊಂಡು ಈ ಬಿಕ್ಕಟ್ಟನ್ನು ಬಗೆಹರಿಸಿ ವಿದ್ಯಾರ್ಥಿಗಳನ್ನು ರಕ್ಷಿಸಬೇಕು" ಎಂದಿದ್ದಾರೆ.
"ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿನ ಈಗಿನ ಬಿಕ್ಕಟ್ಟಿಗೆ ಸಿಎಂ ಮತ್ತು ಶಿಕ್ಷಣಸಚಿವ ಸುರೇಶ್ ಕುಮಾರ್ ಅವರೇ ನೇರ ಹೊಣೆಗಾರರು. ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ಜಗಳ ತಂದು ಹಾಕಿ ಇವರು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
"ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇಲ್ಲ. ತರಗತಿಗಳಿಲ್ಲದೆ ಇದ್ದರೂ ಪೋಷಕರಿಂದ ಪೂರ್ಣಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದಕ್ಕಾಗಿ ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿ ಪೋಷಕರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಸರ್ಕಾರ ಕಣ್ಣುಮುಚ್ಚಿಕೊಂಡು ಕೂತಿದೆ" ಎಂದು ಹೇಳಿದ್ದಾರೆ.
"ತರಗತಿಗಳು ನಡೆಯದೆ ಇದ್ದರೂ ಬೋದನಾ ಶುಲ್ಕದ ಜೊತೆಯಲ್ಲಿ ಪ್ರಯೋಗಶಾಲೆ, ಲೈಬ್ರೆರಿ ಮತ್ತಿತರ ಪಠ್ಯೇತರ ಶುಲ್ಕ ವಸೂಲಿಗೆ ಹೊರಟಿರುವ ಖಾಸಗಿ ಶಾಲೆಗಳು ಸರ್ಕಾರದ ಪೊಳ್ಳುಬೆದರಿಕೆಗೆ ಜಗ್ಗುತ್ತಿಲ್ಲ. ಬಿಜೆಪಿ ಸರ್ಕಾರ ಖಾಸಗಿ ಶಾಲೆಗಳ ಜೊತೆ ಷಾಮೀಲಾಗಿದೆ" ಎಂದು ಆರೋಪಿಸಿದ್ದಾರೆ.
"ಶಾಲೆ ಪುನರಾರಂಭದ ಬಗ್ಗೆ ಸರಣಿ ಸಭೆಗಳು, ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳ ತರಹೇವಾರಿ ಹೇಳಿಕೆಗಳು ಪೋಷಕರನ್ನು ಗೊಂದಲಕ್ಕೆ ನೂಕಿವೆ. ತಕ್ಷಣ ಸಚಿವ ಸುರೇಶ್ ಕುಮಾರ್ ಖಾಸಗಿ ಶಾಲೆಗಳು ಮತ್ತು ಪೋಷಕರ ಸಭೆ ಕರೆದು ಪಾರದರ್ಶಕವಾಗಿ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು" ಎಂದು ಒತ್ತಾಯಿಸಿದ್ದಾರೆ.