ಬೆಂಗಳೂರು, ಡಿ.20 (DaijiworldNews/PY): "ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವಾಲಯವು, ಮುಂಬರುವ ವರ್ಷದಲ್ಲಿ ಕರ್ನಾಟಕದಲ್ಲಿ 1,16,144 ಕೋಟಿ. ರೂ.ಯ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಲಿದೆ" ಎಂದು ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ನಾಟಕದಲ್ಲಿ 25 ಹೆದ್ದಾರಿ ಯೋಜನೆಗಳ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ 8 ಪೂರ್ಣಗೊಂಡ ಹೆದ್ದಾರಿಗಳ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
"ರಸ್ತೆ ಸುರಕ್ಷಿತ ಕ್ರಮದ ಭಾಗವಾಗಿ ಶಿರಾಡಿ, ಚಾರ್ಮಾಡಿ ಹಾಗೂ ಸಂಪಾಜೆ ಘಾಟ್ ರಸ್ತೆಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವ ಸಲುವಾಗಿ 115 ಕೋಟಿ.ರೂ ಅನುಮೋದನೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
"ಶಿರಾಡಿ ಘಾಟ್ನಲ್ಲಿ 23.60 ಕಿ.ಮೀ ಉದ್ದದ ಸುರಂಗ ಕಾಮಗಾರಿ ಕುರಿತು ವಿವರವಾದ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ನೀಡಲಾಗಿದೆ. ಈ ಯೋಜನೆಯ ಅಂದಾಜು ವೆಚ್ಚ 10,000 ಕೋಟಿ ರೂ. ಯೋಜನೆಯ ಬಿಡ್ ದಾಖಲೆಗಳು, ಅನುಮತಿ ಮತ್ತು ಭೂಸ್ವಾಧೀನ ಕಾರ್ಯಗಳು ಪ್ರಗತಿಯಲ್ಲಿವೆ" ಎಂದು ತಿಳಿಸಿದ್ದಾರೆ.
"ವಾಣಿಜ್ಯ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಗೋವಾದಿಂದ ಕೇರಳದವರೆಗೆ ಬಂದರುಗಳ ಸಂಪರ್ಕವನ್ನು ಕಲ್ಪಿಸಲಾಗುವುದು. ಬಂದರು ನಗರಗಳಾದ ಬೇಲೆಕೇರಿ, ಕಾರವಾರ ಹಾಗೂ ಮಂಗಳೂರು ಮಧ್ಯೆ ಸುಮಾರು 3,443 ಕೋಟಿ. ರೂ ವೆಚ್ಚದಲ್ಲಿ ಸಂಪರ್ಕ ಕಾರ್ಯ ಚಾಲ್ತಿಯಲ್ಲಿದೆ. ಅಲ್ಲದೇ ಬಹುತೇಕ ಕಾರ್ಯಗಳು ಪೂರ್ಣಗೊಂಡಿವೆ" ಎಂದು ತಿಳಿಸಿದ್ದಾರೆ.
"ಭಾರತ್ ಮಾಲಾ ಹಾಗೂ ಇತರ ಯೋಜನೆಗಳಲ್ಲಿ 31,035 ಕೋಟಿ. ರೂ ವೆಚ್ಚದಲ್ಲಿ 19 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ" ಎಂದಿದ್ದಾರೆ.
"ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ಆದ್ಯತೆಯ ಯೋಜನೆಗಳಲ್ಲಿ ಒಂದೆಂದು ಗುರುತಿಸಲಾಗಿರುವ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇಯಲ್ಲಿ ಕರ್ನಾಟಕದಲ್ಲಿ 76 ಕಿ.ಮೀ ದೂರದಲ್ಲಿರುವ ಮೂರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
"ತುಮಕೂರು ಜಿಲ್ಲೆಯ ದಾಬಸ್ಪೇಟೆ ಬಳಿ ಮಲ್ಟಿಮಾಡಲ್ ಲಾಜಿಸ್ಟಿಕ್ ಪಾರ್ಕ್ ಸ್ಥಾಪಿಸಲು ಸಾಧ್ಯತಾ ವರದಿಯು ಫೆಬ್ರವರಿ 2021ರಲ್ಲಿ ಕೈಸೇರಲಿದೆ. ಈ ಯೋಜನೆಯಿಂದ ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ" ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರು, ರಾಜ್ಯ ಸಚಿವ ಸಂಪುಟದ ಸದಸ್ಯರು, ಸಂಸದರು, ಶಾಸಕರು, ಪ್ರತಿನಿಧಿಗಳು ಉಪಸ್ಥಿತರಿದ್ದರು.