ಪಾಟ್ನಾ, ಡಿ.20 (DaijiworldNews/MB) : ಆರ್ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಕ್ಷೀಣಿಸಿದ್ದು, ಅವರ ಕಿಡ್ನಿಯ ಶೇ.25ರಷ್ಟು ಭಾಗ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಲಾಲು ಪ್ರಸಾದ್ ಅವರ ಪುತ್ರ ತೇಜಸ್ವಿ ಯಾದವ್, ''ಲಾಲು ಪ್ರಸಾದ್ ಯಾದವ್ ಅವರ ಕಿಡ್ನಿಗಳು ಶೇ.25ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಆರೋಗ್ಯ ಸ್ಥಿರವಾಗಿದ್ದು ಆರೋಗ್ಯದ ಬಗ್ಗೆ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ'' ಎಂದು ತಿಳಿಸಿದ್ದಾರೆ.
''ಹಾಗೆಯೇ ಚುನಾವಣೆ ಕಾರಣದಿಂದಾಗಿ ಕಳೆದ 4-5 ತಿಂಗಳಿನಿಂದ ನಾನು ತಂದೆಯನ್ನು ಭೇಟಿಯಾಗಿರಲಿಲ್ಲ. ಆ ಹಿನ್ನೆಲೆ ಇಂದು ಭೇಟಿಯಾದೆ'' ಎಂದು ಹೇಳಿದರು.
''ರಿಮ್ಸ್ ವೈದ್ಯರೊಂದಿಗೆ ಮಾತ್ರವಲ್ಲದೆ ದೆಹಲಿಯ ಕೆಲವು ಪ್ರಖ್ಯಾತ ವೈದ್ಯರು ಮತ್ತು ನಮ್ಮ ಕುಟುಂಬ ವೈದ್ಯರೊಂದಿಗೆ ಮಾತನಾಡುತ್ತಿದ್ದೇವೆ. ಕಿಡ್ನಿಯು ಶೇ.25ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇದು ಗಂಭೀರ ಪರಿಸ್ಥಿತಿ'' ಎಂದು ತಿಳಿಸಿದ್ದಾರೆ.
ಲಾಲು ಪ್ರಸಾದ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಬ್ಬರು, ''ಲಾಲು ಪ್ರಸಾದ್ ಅವರ ಕಿಡ್ನಿಗಳು ಶೇ.25ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿವೆ'' ಎಂದು ಇತ್ತೀಚೆಗೆ ತಿಳಿಸಿದ್ದರು.