ಬೆಂಗಳೂರು, ಡಿ.20 (DaijiworldNews/MB) : ''ಈ ಭೂಮಿಯಲ್ಲಿ ಶತಮಾನಗಳಿಂದ ವಾಸವಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಕಲ್ಪಿಸಲು ಸಿದ್ದರಿಲ್ಲ, ಇದು ಪ್ರಜಾಪ್ರಭುತ್ವವಿರೋಧಿ ನಡೆಯಾಗಿದೆ'' ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಪ್ರಕಾಶ್ ಕಾರಟ್ ಆರೋಪಿಸಿದರು.
ಅಂತರರಾಷ್ಟ್ರೀಯ ಅಲ್ಪಸಂಖ್ಯಾತರ ದಿನಾಚರಣೆ ಅಂಗವಾಗಿ ಸಿಪಿಎಂ ಅಲ್ಪಸಂಖ್ಯಾತ ಹಕ್ಕುಗಳ ಸಮಿತಿಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಸಂವಿಧಾನದಲ್ಲಿ ಧಾರ್ಮಿಕ ಪ್ರಚಾರಕ್ಕೆ ಅವಕಾಶವಿದ್ದು, ಆದರೆ ಒತ್ತಾಯ ಮಾಡಿ ಮತಾಂತರಿಸಲು ನಮ್ಮ ಸಂವಿಧಾನ ಅವಕಾಶ ನೀಡುವುದಿಲ್ಲ ಎಂದು ಹೇಳಿದ ಅವರು, ಆದರೆ ಬಿಜೆಪಿಯು ಲವ್ ಜಿಹಾದ್ ಹೆಸರಲ್ಲಿ ವ್ಯಕ್ತಿಯ ಸಂಗಾತಿ ಆಯ್ಕೆಯ ಸ್ವಾತಂತ್ಯ್ರವನ್ನು ಹತ್ತಿಕುತ್ತಿದೆ'' ಎಂದು ದೂರಿದರು.
''ಆಹಾರದ ಮೇಲೆಯೂ ಈಗ ದಾಳಿ ನಡೆಯುತ್ತಿದ್ದು, ಜನರು ತಾವು ತಿಂದ ಮಾಂಸ ದನದ ಮಾಂಸವಲ್ಲ ಎಂದು ಸಾಬೀತುಪಡಿಸಬೇಕಾದ ಹಂತ ತಲುಪಿದೆ'' ಎಂದು ಹೇಳಿದ ಅವರು, ''ಸಮಾನತೆಗಾಗಿ ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಪ್ರಜಾಪಭುತ್ವವಾದಿ ಮತ್ತು ಜಾತ್ಯತೀತ ಶಕ್ತಿಗಳು ಒಂದಾಗಿ ಚಳುವಳಿ ಸಂಘಟಿಸಬೇಕು'' ಎಂದು ಹೇಳಿದರು.
''ಹಾಗೆಯೇ ಕಮ್ಯುನಿಸ್ಟ್ ಪಕ್ಷದ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಅಸುರಕ್ಷತೆಯ ಭಾವ ಇರುವುದಿಲ್ಲ'' ಎಂದು ಕೂಡಾ ಹೇಳಿದರು.