ಬೆಂಗಳೂರು, ಡಿ.20 (DaijiworldNews/MB) : ''ಕೊಡವರೂ ಬೀಫ್ ತಿನ್ನುತ್ತಾರೆ'' ಎಂಬ ತನ್ನ ಹೇಳಿಕೆಗೆ ಸಂಬಂಧಿಸಿ ಮತ್ತೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ''ಇದರಿಂದ ಕೊಡವ ಸಮುದಾಯಕ್ಕೆ ನೋವಾಗಿದ್ದರೆ ಈ ಬಗ್ಗೆ ನಾನು ವಿಷಾದಿಸುತ್ತೇನೆ'' ಎಂದು ಹೇಳಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ''ಬೀಫ್ ತಿನ್ನುವವರು ಕೇಲವ ಮುಸಲ್ಮಾನರಾ? ದಲಿತರು, ಕ್ರೈಸ್ತರು, ಕೊಡಗಿನಲ್ಲಿ ಕೊಡವರು ತಿನ್ನುತ್ತಾರೆ. ಬೇರೆ ಬೇರೆ ಕಡೆ ತಿನ್ನುತ್ತಾರೆ. ಹಿಂದುಳಿದವರು ತಿನ್ನುತ್ತಾರೆ. ಎಲ್ಲರೂ ತಿನ್ನುತ್ತಾರೆ'' ಎಂದು ಹೇಳಿದ್ದರು.
ಈ ಹೇಳಿಕೆಗೆ ಕೊಡವ ಸಮುದಾಯದ ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ''ಆಡು, ಕುರಿ, ಕೋಳಿ, ಹಂದಿ, ದನ ಹೀಗೆ ನಮ್ಮಲ್ಲಿ ಭಿನ್ನ ಆಹಾರ ಸಂಸ್ಕೃತಿ ಇದೆ. ಆಹಾರಕ್ಕೆ ಜಾತಿ-ಧರ್ಮಗಳನ್ನು ಗಂಟುಹಾಕುವುದು ತಪ್ಪು ಎಂಬರ್ಥದಲ್ಲಿ ನಾನು ಹೇಳಿದ್ದೇನೆಯೇ ಹೊರತು ಕೊಡವರು ಬೀಪ್ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ. ಕೊಡವ ಸಂಸ್ಕೃತಿ ಬಗ್ಗೆ ನನಗೆ ಅಪಾರವಾದ ಗೌರವ ಇದೆ'' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಆ ಬಳಿಕ ಈ ಹೇಳಿಕೆಗೆ ಸಂಬಂಧಿಸಿ ಟ್ವೀಟ್ ಮಾಡಿರುವ ಅವರು, ''ಕೊಡವರೂ ಬೀಫ್ ತಿನ್ನುತ್ತಾರೆ ಎಂಬ ನನ್ನ ಹೇಳಿಕೆ ತಪ್ಪುಗ್ರಹಿಕೆಯಿಂದ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಕೊಡವ ಸಮುದಾಯಕ್ಕೆ ನೋವಾಗಿದ್ದರೆ ಈ ಬಗ್ಗೆ ನಾನು ವಿಷಾದಿಸುತ್ತೇನೆ. ನನ್ನ ನೆರೆಯ ಜಿಲ್ಲೆಯಾದ ಕೊಡಗಿನ ಸಂಸ್ಕೃತಿ ಬಗ್ಗೆ ನನಗೆ ಅರಿವಿದೆ, ವಿಶೇಷವಾದ ಗೌರವವೂ ಇದೆ'' ಎಂದು ಹೇಳಿದ್ದಾರೆ.