ಬೆಂಗಳೂರು, ಡಿ.19 (DaijiworldNews/PY): ಕೊಡವರು ಬೀಫ್ ತಿನ್ನುತ್ತಾರೆ ಎಂದು ಹೇಳಿದ್ದ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, "ದಲಿತರು, ಹಿಂದುಳಿದವರು ಗೋಮಾಂಸ ತಿನ್ನುತ್ತಾರೆಂದು ಅವರ ಸಂಸ್ಕೃತಿಗೆ ಮಸಿಬಳಿದಿರಿ. ಸಾಲದೆಂಬಂತೆ, ಅಲ್ಪಜ್ಞಾನಿಗಳಾಗಿ ಕೊಡವರ ಬಗ್ಗೆ ಮಾತನಾಡುತ್ತಿದ್ದೀರಿ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಶಾಸಕ ಸಿದ್ದರಾಮಯ್ಯ ಅವರೇ, ದಲಿತರು, ಹಿಂದುಳಿದವರು ಗೋಮಾಂಸ ತಿನ್ನುತ್ತಾರೆಂದು ಅವರ ಸಂಸ್ಕೃತಿಗೆ ಮಸಿಬಳಿದಿರಿ. ಸಾಲದೆಂಬಂತೆ, ಅಲ್ಪಜ್ಞಾನಿಗಳಾಗಿ ಕೊಡವರ ಬಗ್ಗೆ ಮಾತನಾಡುತ್ತಿದ್ದೀರಿ. ನಿಮ್ಮ ಗೋಮಾಂಸದ ಆಸೆ ಇಡೀ ನಾಡಿಗೆ ಗೊತ್ತಿದೆ!. ಸ್ವಾಭಿಮಾನಿ ಕೊಡವರ ಬಗ್ಗೆ ಮಾತನಾಡಿದರೆ ಅಲ್ಲಿ ಕಾಲಿಡಲೂ ಯೋಚಿಸುವಂತೆ ಅವರೇ ಪಾಠ ಕಲಿಸುತ್ತಾರೆ" ಎಂದಿದ್ದಾರೆ.
''ಸಿದ್ದರಾಮಯ್ಯನವರು ಗೋ ಹತ್ಯೆ ಪರವಾಗಿದ್ದಾರೆ, ಸಿದ್ದರಾಮಯ್ಯರ ಪರವಾಗಿದ್ದಾರೆ ಎಂದು ಹೇಳುತ್ತಾರೆ. ಅವರೇನು ಮನುಷ್ಯರು ಅಲ್ವಾ? ಬೀಫ್ ತಿನ್ನುವವರು ಕೇಲವ ಮುಸಲ್ಮಾನರಾ? ದಲಿತರು, ಕ್ರೈಸ್ತರು, ಕೊಡಗಿನಲ್ಲಿ ಕೊಡವರು ತಿನ್ನುತ್ತಾರೆ. ಬೇರೆ ಬೇರೆ ಕಡೆ ತಿನ್ನುತ್ತಾರೆ. ಹಿಂದುಳಿದವರು ತಿನ್ನುತ್ತಾರೆ. ಎಲ್ಲರೂ ತಿನ್ನುತ್ತಾರೆ. ನಾನು ಏನು ತಿನ್ನಬೇಕು ಎಂಬುದು ನನ್ನ ಇಷ್ಟ. ಯಾರಿಗೂ ತಿನ್ನಿ ಎಂದು ಒತ್ತಡ ಹೇರಲ್ಲ'' ಎಂದು ಸಿದ್ದರಾಮಯ್ಯನವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರು, ''ಆಡು, ಕುರಿ, ಕೋಳಿ, ಹಂದಿ, ದನ ಹೀಗೆ ನಮ್ಮಲ್ಲಿ ಭಿನ್ನ ಆಹಾರ ಸಂಸ್ಕೃತಿ ಇದೆ. ಆಹಾರಕ್ಕೆ ಜಾತಿ-ಧರ್ಮಗಳನ್ನು ಗಂಟುಹಾಕುವುದು ತಪ್ಪು ಎಂಬರ್ಥದಲ್ಲಿ ನಾನು ಹೇಳಿದ್ದೇನೆಯೇ ಹೊರತು ಕೊಡವರು ಬೀಪ್ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ. ಕೊಡವ ಸಂಸ್ಕೃತಿ ಬಗ್ಗೆ ನನಗೆ ಅಪಾರವಾದ ಗೌರವ ಇದೆ'' ಎಂದಿದ್ದಾರೆ.