ನವದೆಹಲಿ, ಡಿ.19 (DaijiworldNews/PY): "ವಿಶ್ವವು ಭಾರತದ ಬಗ್ಗೆ ಹೊಂದಿದ್ದ ಗ್ರಹಿಕೆಯನ್ನು ತಮ್ಮ ಸರ್ಕಾರದ ಅವಧಿಯಲ್ಲಿ ತಂದ ಸುಧಾರಣಾ ಕ್ರಮಗಳು ಬದಲಿಸಿವೆ" ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದ ವಾಣಿಜ್ಯೋದ್ಯಮಗಳ ಒಕ್ಕೂಟವಾದ ಅಸೋಚಾಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, "ಮೊದಲು ಹೂಡಿಕೆದಾರರು ಭಾರತದಲ್ಲಿ ಏಕೆ ಹೂಡಿಕೆ ಮಾಡಬೇಕು ಎಂದು ಕೇಳುತ್ತಿದ್ದರು. ಆರು ವರ್ಷಗಳಲ್ಲಿ ತಂದ ಬದಲಾವಣೆಯ ಹಿನ್ನೆಲೆ ಭಾರತದಲ್ಲಿ ಏಕೆ ಹೂಡಿಕೆ ಮಾಡಬಾರದು ಎಂದು ಹೂಡಿಕೆದಾರರು ಹೇಳುತ್ತಿದ್ದಾರೆ" ಎಂದರು.
"ಪ್ರಸ್ತುತ ಖಾಸಗಿ ವಲಯದ ಮೇಲೆ ಸರ್ಕಾರವು ಇಟ್ಟಿರುವ ಭರವಸೆ ಹಾಗೂ ವಿದೇಶಿ ಹೂಡಿಕೆದಾರರಿಗೆ ನೀಡುತ್ತಿರುವ ಪ್ರೋತ್ಸಾಹದಿಂದ ಹೂಡಿಕೆದಾರರು, ಭಾರದಲ್ಲಿ ಏಕೆ ಹೂಡಿಕೆ ಮಾಡಬಾರದು ಎಂದು ಕೇಳುತ್ತಿದ್ದಾರೆ. ದೇಶವು ಆತ್ಮನಿರ್ಭರವಾಗಲು ತಮ್ಮಿಂದಾಗುವಂತ ಎಲ್ಲಾ ಪ್ರಯತ್ನಗಳನ್ನು ಕೈಗಾರಿಕೆಗಳು ಮಾಡಬೇಕು" ಎಂದರು.
"ಆರು ತಿಂಗಳುಗಳ ಹಿಂದೆ ಅನುಷ್ಠಾನಕ್ಕೆ ಬಂದ ಕೃಷಿ ಸುಧಾರಣೆಗಳು ಇದೀಗ ರೈತರಿಗೆ ಲಾಭ ತಂದುಕೊಡಲು ಪ್ರಾರಂಭಿಸಿವೆ" ಎಂದು ತಿಳಿಸಿದರು.
"ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಧಿಕ ಹಣ ವಿನಿಯೋಗ ಮಾಡುವ ಅವಶ್ಯಕತೆ ಇದೆ. ಭಾರತದಲ್ಲಿ ಶೇ.70ರಷ್ಟು ಮೊತ್ತವು ಸರ್ಕಾರದಿಂದ ಬರುತ್ತದೆ. ಅಮೇರಿಕಾದಲ್ಲಿ ಖಾಸಿ ವಲಯದಿಂದ ಶೇ.70ರಷ್ಟು ಮೊತ್ತ ಬರುತ್ತದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಖಾಸಗಿ ವಲಯದಿಂದ ಬರುವ ಮೊತ್ತದ ಪ್ರಮಾಣ ಅಧಿಕವಾಗಬೇಕಿದೆ. ಅಲ್ಲದೇ, ಬಾಹ್ಯಾಕಾಶ ಸೇರಿದಂತೆ ಕೃಷಿ, ಇಂಧನ, ರಕ್ಷಣೆ ನಿರ್ಮಾಣ ಕ್ಷೇತ್ರಗಲ್ಲಿ ಕೂಡಾ ಹೆಚ್ಚಿನ ಅಭಿವೃದ್ಧಿ ಕಾರ್ಯವಾಗಬೇಕಿದೆ" ಎಂದರು.