ಹುಬ್ಬಳ್ಳಿ, ಡಿ.19 (DaijiworldNews/PY): "ಪರಿಷತ್ತಿನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ನ ಸಭಾಪತಿ ಸ್ಥಾನಕ್ಕೆ ಪಕ್ಷಾತೀತವಾಗಿ ಆಯ್ಕೆಯಾಗಲಿ" ಎಂದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರೊಂದಿಗೆ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡುವಂತೆ ಕೋರಿದ್ದೇವೆ. ಈ ವಿಚಾರಕ್ಕೆ ಎಲ್ಲಾ ಪಕ್ಷದವರು ಒಪ್ಪಿಗೆ ನೀಡಲಿದ್ದಾರೆ ಎನ್ನುವ ಭರವಸೆ ಇದೆ" ಎಂದಿದ್ದಾರೆ.
"ಜೆಡಿಎಸ್ನಿಂದ ಸಭಾಪತಿ ಸ್ಥಾನದ ಆಯ್ಕೆಯ ಕುರಿತಾಗಿ ಬಸವರಾಜ ಹೊರಟ್ಟಿ ಅವರನ್ನು ಅಂತಿಮ ಮಾಡಲಾಗಿದ್ದು, ಬಸವರಾಜ ಹೊರಟ್ಟಿ ಅವರನ್ನು ಸಭಾಪತಿಯನ್ನಾಗಿ ಮಾಡಲು ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಹಮತ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
"ವಿಧಾನ ಪರಿಷತ್ನಲ್ಲಿ ಗದ್ದಲ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಜನತೆಯೊಂದಿಗೆ ಸಂಸದೀಯ ಕ್ಷಮೆ ಯಾಚಿಸಿದ್ದಾರೆ. ಈ ಮುತ್ಸದ್ದಿ ರಾಜಕಾರಣಿ ಸಭಾಪತಿ ಆಗುವುದು ಸೂಕ್ತ" ಎಂದಿದ್ದಾರೆ.