ನವದೆಹಲಿ, ಡಿ.19 (DaijiworldNews/MB) : ''ಅನ್ನದಾತರು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಈ ಪತ್ರವನ್ನು ಓದಿ'' ಎಂದು ಪತ್ರದ ಪ್ರತಿ ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ರಾಜ್ಯದ ರೈತರಲ್ಲಿ ಕನ್ನಡದಲ್ಲೇ ಮನವಿ ಮಾಡಿದ್ದಾರೆ.
ಈ ಬಗ್ಗೆ ಕನ್ನಡ ಲಿಪಿಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ''ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪತ್ರದ ಮೂಲಕ ಅನ್ನದಾತ ಸೋದರ ಹಾಗು ಸೋದರಿಯರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅನ್ನದಾತರೊಂದಿಗೆ ಸೌಜನ್ಯಪೂರ್ವಕ ಮಾತುಕತೆಗೆ ಪ್ರಯತ್ನ ಮಾಡಲಾಗಿದೆ. ಅನ್ನದಾತರು ಈ ಪತ್ರವನ್ನು ಓದಿ. ದೇಶವಾಸಿಗಳು, ಈ ಸಂದೇಶವನ್ನು ಹೆಚ್ಚು ಜನರಿಗೆ ಮನವರಿಕೆ ಮಾಡುವಂತೆ ಕೋರುತ್ತೇನೆ'' ಎಂದು ಮನವಿ ಮಾಡಿದ್ದಾರೆ.
ಇನ್ನು ಸುಮಾರು 12 ಪುಟವಿರುವ ಈ ಪತ್ರವೂ ಸಂಪೂರ್ಣವಾಗಿ ಕನ್ನಡದಲ್ಲಿದ್ದು ಏಳು ಸತ್ಯಾಂಶ ಹಾಗೂ ಸುಳ್ಳು ಅಂಶಗಳೆಂದು ಪಟ್ಟಿ ಮಾಡಲಾಗಿದೆ.
ರಾಜಕೀಯವಾಗಿ ಹಿನ್ನಡೆ ಕಂಡಿರುವವರು, ''ರೈತರ ಭೂಮಿಯನ್ನು ಕಸಿದುಕೊಳ್ಳಲಾಗುತ್ತದೆ ಎಂಬ ಸುಳ್ಳನ್ನು ಹರಡುತ್ತಿದ್ದಾರೆ. ರೈತರು ಭೂಮಿಯ ಮಾಲೀಕ ಎಂದು ಹೊಸ ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ರೈತರಿಂದ ಒಂದು ಇಂಚು ಭೂಮಿಯನ್ನು ಸಹ ಕಸಿದುಕೊಳ್ಳಲು ಅವಕಾಶ ನೀಡುವುದಿಲ್ಲ'' ಎಂದು ಪತ್ರದ ಮೂಲಕ ತೋಮರ್ ತಿಳಿಸಿದ್ದಾರೆ.
''ನಾವು ರೈತರು ಮತ್ತು ಅವರ ಸಂಘಟನೆಗಳೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದೇವೆ. ಅವರ ಸಮಸ್ಯೆಗಳನ್ನು ಪರಿಹರಿಸಲು ಸದಾ ಸಿದ್ದರಿದ್ದೇವೆ'' ಎಂದು ತೋಮರ್ ಭರವಸೆ ನೀಡಿದ್ದು, ''ಆದರೆ ರೈತರ ಸೋಗಿನಲ್ಲಿ ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಸೃಷ್ಟಿಸಿರುವ ವಿಷವ್ಯೂಹವನ್ನು ಅರ್ಥಮಾಡಿಕೊಳ್ಳುವುದು ಅಷ್ಟೇ ಮುಖ್ಯ'' ಎಂದು ಕೂಡಾ ಹೇಳಿದ್ದಾರೆ.