ಶಿವಮೊಗ್ಗ,ಡಿ.19 (DaijiworldNews/HR): ಸಿದ್ದರಾಮಯ್ಯನವರು ತಮ್ಮ ಪಕ್ಷದ ಮುಖಂಡರನ್ನೇ ದೂಷಿಸುತ್ತಿದ್ದಾರೆ, ಅವರಿಗೆ ತಾಕತ್ತಿದ್ದರೆ ಬೆನ್ನಿಗೆ ಚೂರಿ ಹಾಕಿದವರ ಹೆಸರು ಬಹಿರಂಗಪಡಿಸಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಸಿದ್ದರಾಮ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸಮಯದಲ್ಲಿ ಜನಪರ ಕೆಲಸಗಳನ್ನು ಮಾಡಿದ್ದರೆ ಈಗ ಸೋಲುತ್ತಿರಲಿಲ್ಲ, ಡಾ.ಜಿ.ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಶಾಸಕರು ಸೋತಾಗ ಏಕೆ ಕಾರಣಗಳನ್ನು ಹುಡುಕಲಿಲ್ಲ. ಸಿದ್ದರಾಮಯ್ಯ ಅವರಿಗೆ ಸೋತಾಗ ಮಾತ್ರ ಕಾಂಗ್ರೆಸ್ ನೆನಪಾಗುತ್ತದೆ" ಎಂದರು.
ಇನ್ನು "ಬಿಜೆಪಿ ಮತ್ತು ಜೆಡಿಎಸ್ ಜೊತೆಗೆ ನಮ್ಮ ಪಕ್ಷದ ಕೆಲವರು ಸೇರಿಕೊಂಡು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಿದರು ಎನ್ನುವ ಅವರಿಗೆ ಬಿಜೆಪಿ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದ್ದರೆ ಬಾದಾಮಿ ಕ್ಷೇತ್ರದಲ್ಲೂ ಸೋಲುತ್ತಿದ್ದರು ಎನ್ನುವ ಸಾಮಾನ್ಯ ಜ್ಞಾನವೂ ಸಿದ್ದರಾಮಯ್ಯನವರಿಗೆ ಇಲ್ಲ" ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು, ಆ ಕುರಿತು ಅವರಿಗೆ ಕ್ಷಮೆ ಕೇಳಬೇಕು. ಇಲ್ಲ ತಮ್ಮ ಸಂಸ್ಕೃತಿ ಇದೇ ಎಂದು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.