ಕೋಲ್ಕತಾ, ಡಿ.19 (DaijiworldNews/PY): ಪಶ್ಚಿಮ ಬಂಗಾಳದ ಮಿಡ್ನಾಪುರ್ನಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಟಿಎಂಸಿ ಮಾಜಿ ಪ್ರಭಾವಿ ಮುಖಂಡ ಸುವೇಂದು ಅಧಿಕಾರಿ ಶನಿವಾರ ಬಿಜೆಪಿಗೆ ಸೇರ್ಪಡೆಯಾದರು.
ಸ್ಪೀಕರ್ ಅವರ ಆದೇಶದ ಮಧ್ಯೆಯೇ ಅಮಿತ್ ಶಾ ಅವರ ಸಮ್ಮುಖದಲ್ಲಿ ಇಂದು ಸುವೇಂದು ಅಧಿಕಾರಿಯವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಎಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಅಮಿತ್ ಶಾ ಅವರು ಪ್ರತಿಷ್ಠೆಯಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ಈ ಹಿನ್ನೆಲೆ ಎರಡು ದಿನಗಳ ಭೇಟಿಗಾಗಿ ಶನಿವಾರ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದರು. ಈ ವೇಳೆ ಮಿಡ್ನಾಪುರದಲ್ಲಿನ ಬಿಜೆಪಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಇತ್ತೀಚೆಗೆ ಟಿಎಂಸಿ ಪ್ರಭಾವಿ ಮುಖಂಡ ಸುವೇಂದು ಅಧಿಕಾರಿ ಅವರು ಪಕ್ಷವನ್ನು ತ್ಯಜಿಸಿದ್ದರು. ಈ ನಡುವೆ ಸುವೇಂದು ಅವರ ರಾಜೀನಾಮೆ ಸಮರ್ಪಕವಾಗಿಲ್ಲ ಹಾಗಾಗಿ ಸ್ವೀಕಾರ ಮಾಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಸ್ಪೀಕರ್ ಹೇಳಿದ್ದು, ಅಲ್ಲದೇ, ಡಿ.21ರಂದು ಸ್ಪೀಕರ್ ಕಚೇರಿಗೆ ಭೇಟಿಯಾಗುವಂತೆ ಕೂಡಾ ತಿಳಿಸಿದ್ದಾರೆ.