ಹೈದರಾಬಾದ್, ಡಿ.19 (DaijiworldNews/PY): "ಭಾರತವು ಚೀನಾದೊಂದಿಗಿನ ಗಡಿ ವಿವಾದವನ್ನು ಶಾಂತಿಯುತವಾದ ರೀತಿಯಲ್ಲಿ ಬಗೆಹರಿಸಿಕೊಳ್ಳಲು ಇಚ್ಛಿಸುತ್ತದೆ. ಆದರೆ, ದೇಶದ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುವುದನ್ನು ಸಹಿಲಸಾಧ್ಯ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಶನಿವಾರ ದುಂಡಿಗಲ್ ವಾಯುನೆಲೆಯಲ್ಲಿ ನಡೆದ ಪದವಿ ಪ್ರದಾನ ಹಾಗೂ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಭಾರತವು ಚೀನಾದೊಂದಿಗಿನ ವಿವಾದವನ್ನು ಸಮರ್ಥವಾಗಿ ನಿಭಾಯಿಸಿದೆ. ಏಕಪಕ್ಷೀಯ ಕ್ರಮಗಳಿಗೆ ತಕ್ಕದಾದ ಪ್ರತ್ಯುತ್ತರ ನೀಡಲು ಸಮರ್ಥ ಎನ್ನುವುದನ್ನು ಭಾರತ ಸಾಬೀತುಪಡಿಸಿದೆ" ಎಂದು ತಿಳಿಸಿದ್ದಾರೆ.
"ಗಡಿಯಲ್ಲಿನ ಸಂಘರ್ಷವನ್ನು ನಿವಾರಿಸಲು ಭಾರತ ತೆಗೆದುಕೊಂಡ ಕ್ರಮಗಳ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ಈ ವಿಚಾರವಾಗಿ ಕೆಲ ದೇಶಗಳಿಂದ ಬೆಂಬಲ ಕೂಡಾ ಲಭಿಸಿದೆ" ಎಂದಿದ್ದಾರೆ.
"ನಮಗೆ ಸಂಘರ್ಷ ಬೇಡ ಬದಲಾಗಿ ಶಾಂತಿ ಬೇಕು. ಆದರೆ, ಘನತೆ, ಗೌರವಕ್ಕೆ ಧಕ್ಕೆ ಬಂದರೆ ಸಹಿಸುವುದಿಲ್ಲ" ಎಂದು ತಿಳಿಸಿದ್ದಾರೆ.