ಮೈಸೂರು, ಡಿ.19 (DaijiworldNews/PY): "ನಿಮಗೆ ಇಷ್ಟು ದಿನ ಇರಿತದ ನೋವು ಏನೆಂದು ತಿಳಿದಿರಲಿಲ್ಲ. ಇದೀಗ ನಿಮ್ಮ ಪಕ್ಷದವರೇ ಇರಿದಾಗ ನೋವು ಅರ್ಥವಾಯಿತಲ್ಲವೇ ಸಿದ್ದರಾಮಯ್ಯನವರೇ?" ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಕೇಳಿದ್ದಾರೆ.
ಶನಿವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಚಾಮುಂಡೇಶ್ವರಿ ಕ್ಷೇತ್ರದ ಜನರ ಎದುರುಗಡೆ ನೀವು ನಿಮ್ಮ ನೋವು ತೋಡಿಕೊಂಡಿರಿ. ನಿಮ್ಮಗೆ ಇಷ್ಟು ದಿನಗಳವರೆಗೆ ಇರಿತದ ನೋವು ಏನೆಂದು ತಿಳಿದಿರಲಿಲ್ಲ. ಆದರೆ, ಪಕ್ಷದವರೇ ಇರಿದಾಗ ನೋವು ತಿಳಿಯತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ.
"ನಿಮ್ಮನ್ನು ಯಾರು ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದರೋ ನೀವು ಅವರನ್ನೇ ಪಕ್ಷದಿಂದ ಹೊರಕ್ಕೆ ಹೋಗುವಂತೆ ಮಾಡಿದ್ದೀರಿ. ಆ ಸಂದರ್ಭ, ಅದು ನಮಗಾದ ಇರಿತದ ನೋವು. ಈ ಇರಿತದ ನೋವು ಇದೀಗ ನಿಮಗೆ ಅರ್ಥವಾಗುತ್ತಿದೆ. ನಮ್ಮದು ಸಹ ಮೂಳೆ ಮಾಂಸದ ದೇಹ ತಗಡಿನ ದೇಹವಲ್ಲ" ಎಂದು ಕೆಂಡಾಕಾರಿದ್ದಾರೆ.
"ನಿಮಗೆ ಸೋಲು ಉಂಟಾಗಲು ನೀವೇ ಕಾರಣ. ನಿಮ್ಮ ಅಹಂಕಾರ, ಹಿರಿಯ ನಾಯಕರಿಗೆ ಗೌರವ ನೀಡದೇ ಏಕವಚನದಲ್ಲಿ ಮಾತನಾಡುವುದು ಹಾಗೂ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಮುಂದಾಗಿದ್ದು, ಸೇರಿ ಇನ್ನೂ ಕೆಲ ಕಾರಣದಿಂದ ನಿಮಗೆ ಸೋಲಾಗಿದೆ" ಎಂದಿದ್ದಾರೆ.
"ನಾನು ಜೈಲಿಗೆ ಹೋಗೇ ಇಲ್ಲ ಎನ್ನುತ್ತಿದ್ದೀರಿ. ಆದರೆ, ಅರ್ಕಾವತಿ ಬಡಾವಣೆ ಡಿ ನೋಟಿಫಿಕೇಶನ್ ಪ್ರಕರಣದಲ್ಲಿ ಜೈಲಿಗ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನೀವು ಲೋಕಾಯುಕ್ತವನ್ನೇ ಇಲ್ಲದಂತೆಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ" ಎಂದು ಹೇಳಿದ್ದಾರೆ.