ತಿರುವನಂತಪುರ, ಡಿ.19 (DaijiworldNews/PY): ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಡಿ.20ರ ರವಿವಾರದಿಂದ ತೀರ್ಥಯಾತ್ರೆಗೆ ತೆರಳುವ ಭಕ್ತರ ಸಂಖ್ಯೆಯನ್ನು 5000ದವರೆಗೆ ಹೆಚ್ಚಿಸಬೇಕು ಎಂದು ಕೇರಳ ಹೈಕೋರ್ಟ್ ಆದೇಶ ಹೊರಡಿಸಿದೆ.
ಹೈಕೋರ್ಟ್, ಶಬರಿಮಲೆಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಗಣಿಸಿದ್ದು, ನಿಲಕ್ಕಲ್ ತಲುಪುವ ಮೊದಲು 48 ಗಂಟೆಗಳ ಒಳಗಾಗಿ ಆರ್ಟಿಪಿಸಿಆರ್ ಪರೀಕ್ಷೆಯ ಆಧಾರದ ಮೇಲೆ ಕೊರೊನಾ ನೆಗೆಟಿವ್ ಪ್ರಮಾಣಪತ್ರವನ್ನು ಡಿ.30ರಿಂದ ಕಡ್ಡಾಯ ಮಾಡಲಾಗುವುದು ಎಂದು ಆದೇಶದಲ್ಲಿ ಹೇಳಿತ್ತು.
ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಬರುವ ದೈನಂದಿನ ತೀರ್ಥಯಾತ್ರಿಕರ ಸಂಖ್ಯೆಯನ್ನು ಪ್ರಾರಂಭದ ವಾರದ ದಿನಗಳಲ್ಲಿ 1000 ಹಾಗೂ ವಾರಾಂತ್ಯದ ವೇಳೆ 2000 ಎಂದು ನಿಗದಿ ಮಾಡಲಾಗಿತ್ತು. ನಂತರ ದೇವಸ್ಥಾನದಿಂದ ಬರುವ ಆದಾಯ ಕಡಿಮೆಯಾದ ಕಾರಣ ದೇವಸ್ಥಾನವನ್ನು ನಿರ್ವಹಣೆ ಮಾಡುವ ತಿರುವಾಂಕೂರು ದೇವಸ್ವಂ ಮಂಡಳಿಯ ಮನವಿಯ ಮೇರೆಗೆ ಭಕ್ತರ ಸಂಖ್ಯೆಯಬ್ಬಯ 2000 ಹಾಗೂ 3000ಕ್ಕೆ ಅಧಿಕ ಮಾಡಲಾಯಿತು.
ನ.16ರಿಂದ ತೀರ್ಥಯಾತ್ರೆ ಆರಂಭವಾದ ಬಳಿಕ ಇಲ್ಲಿಯವರೆಗೆ 300ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟುಹೊಳಿಸಲಾಗಿತ್ತು.