ನವದೆಹಲಿ, ಡಿ.19 (DaijiworldNews/MB) : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರವಾಗಿ ಭಾರತವು ಶನಿವಾರ 25,152 ಹೊಸ ಕೊರೊನಾ ಸೋಂಕು ಪ್ರಕರಣಗಳನ್ನು ಹಾಗೂ 347 ಕೊರೊನಾ ಸಾವನ್ನು ದಾಖಲಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಒಂದು ಕೋಟಿ ದಾಟಿದ್ದು ದೇಶದಲ್ಲಿ ಒಟ್ಟು 1,00,04,599 ಜನರಿಗೆ ಸೋಂಕು ದೃಢಪಟ್ಟಿದೆ. ಈವರೆಗೆ 1,45,136 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಜನವರಿ 30 ರಂದು ಮೊದಲ ಪ್ರಕರಣ ವರದಿಯಾಗಿದ್ದು ಇದೀಗ 11 ತಿಂಗಳು ಕಳೆದರೂ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಲ್ಲೇ ಇದೆ. ಜುಲೈ 17 ರಂದು ಸೋಂಕುಗಳ ಸಂಖ್ಯೆ 10 ಲಕ್ಷ, ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ, ಸೆಪ್ಟೆಂಬರ್ 16 ರಂದು 50 ಲಕ್ಷ, ಸೆಪ್ಟೆಂಬರ್ 28 ರಂದು 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ ಮತ್ತು ನವೆಂಬರ್ 20 ರಂದು 90 ಲಕ್ಷ ದಾಟಿದ್ದು ಡಿಸೆಂಬರ್ 19 ರಂದು ಒಂದು ಕೋಟಿ ದಾಟಿದೆ.
ಐದು ತಿಂಗಳುಗಳಲ್ಲಿ 10 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಆಗಸ್ಟ್ನಿಂದ ಅಕ್ಟೋಬರ್ವರೆಗಿನ ಮೂರು ತಿಂಗಳಲ್ಲೇ 60 ಲಕ್ಷಕ್ಕೆ ಕೊರೊನಾ ಪ್ರಕರಣಗಳು ಏರಿಕೆಯಾಗಿದೆ.
ನವೆಂಬರ್ 9 ರಂದು ಒಂದು ಕೋಟಿ ಕೊರೊನಾ ಪ್ರಕರಣವನ್ನು ದಾಖಲಿಸಿಕೊಂಡಿರುವ ಅಮೇರಿಕಾದ ಬಳಿಕ ಭಾರತವು ಈ ವರ್ಷದ ಆಗಸ್ಟ್ನಿಂದ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ದೇಶವಾಗಿದೆ.
ಇನ್ನು ಏತನ್ಮಧ್ಯೆ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು ಚೇತರಿಕೆ ಪ್ರಮಾಣವು 95.46 ಶೇಕಡ ಹಾಗೂ ಸಾವಿನ ಪ್ರಮಾಣವು 1.45 ಶೇಕಡವಾಗಿದೆ. ಕಳೆದ 12 ದಿನಗಳಿಂದ ಸಕ್ರಿಯ ಪ್ರಕರಣಗಳು ನಾಲ್ಕು ಲಕ್ಷಕ್ಕಿಂತ ಕಡಿಮೆಯಿದೆ. ಜಾಗತಿಕವಾಗಿ ಅತೀ ಹೆಚ್ಚು ಚೇತರಿಕೆ ಪ್ರಮಾಣ ಹೊಂದಿರುವ ದೇಶಗಳ ಪೈಕಿ ಒಂದಾಗಿದೆ.
ಆರೋಗ್ಯ ಸಚಿವಾಲಯದ ಪ್ರಕಾರ, ಸಕ್ರಿಯ ಪ್ರಕರಣಗಳು ಮತ್ತು ಚೇತರಿಸಿಕೊಂಡ ಪ್ರಕರಣಗಳ ನಡುವಿನ ಅಂತರವು ನಿರಂತರವಾಗಿ ಅಧಿಕಾವಾಗುತ್ತಿದೆ. ಈವರೆಗೆ 95,50,712 ಜನರು ಗುಣಮುಖರಾಗಿದ್ದರೆ, 3,08,751 ಜನರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 16,00,90,514 ಮಾದರಿಗಳನ್ನು ಪರೀಕ್ಷಿಸಲಾಗಿದೆ.