ಚಂಡೀಗಢ, ಡಿ.19 (DaijiworldNews/MB) : ರೈತರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳನ್ನು ದೂರುತ್ತಾ ನಮ್ಮ ಪ್ರತಿಭಟನೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪ ಮಾಡಿದ್ದಾರೆ.
ಪ್ರಧಾನಿ ಮೋದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಎಐಕೆಎಸ್ಸಿಸಿ, ''ಪ್ರಧಾನಿ ಬಿಜೆಪಿಯನ್ನು ವಿರೋಧಿಸುವವರ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ರೈತರು ವಿಪಕ್ಷಗಳೊಂದಿಗೆ ಸೇರಿ ಪ್ರತಿಭಟನೆ ಮಾಡುತ್ತಿದೆ ಎಂದು ರೈತರ ಮೇಲೆ ಪ್ರಧಾನಿ ಬಹಿರಂಗವಾಗಿ ಆರೋಪಿಸಿರುವುದು ಸರಿಯಲ್ಲ'' ಎಂದು ಹೇಳಿದೆ.
''ರೈತರ ಹಕ್ಕನ್ನು ಕಿತ್ತುಕೊಳ್ಳುವ, ದೊಡ್ಡ ಉದ್ಯಮಗಳಿಗೆ ಅನುಕೂಲಕರವಾಗುವ ಮೂರು ಕಾಯ್ದೆಗಳನ್ನು ರದ್ದು ಪಡಿಸುವ ಬದಲಾಗಿ ಪ್ರಧಾನಿಯವರು ವಿಪಕ್ಷದ ಮೇಲೆ ಆರೋಪ ಮಾಡುವುದರಲ್ಲೇ ಮಗ್ನರಾಗಿದ್ದಾರೆ. ಕಾರ್ಪೊರೇಟ್ ಕಂಪೆನಿಗಳಿಗೆ ಕೃಷಿ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಲು 1 ಲಕ್ಷ ಕೋಟಿ ರೂಪಾಯಿ ನೀಡಿರುವ ಮೋದಿ ಸರ್ಕಾರ, ರೈತರಿಗೆ ಯಾವ ಸಹಾಯವನ್ನು ಮಾಡುತ್ತಿಲ್ಲ'' ಎಂದು ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದೆ.