ನವದೆಹಲಿ, ಡಿ.19 (DaijiworldNews/MB) : ಅತ್ಯಾಚಾರ ಸೇರಿದಂತೆ ಹಲವು ಪ್ರಕರಣದ ಆರೋಪಿಯಾಗಿರುವ, ಭಾರತದಿಂದ ಪರಾರಿಯಾಗಿ ತನ್ನದೇ ಆದ ದೇಶ ಕೈಲಾಸವನ್ನು ಸ್ಥಾಪನೆ ಮಾಡಿದ್ದೇನೆ ಎಂದು ಹೇಳುತ್ತಿರುವ, ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ತನ್ನ ದೇಶ ಕೈಲಾಸಕ್ಕೆ ವೀಸಾ ಆಫರ್ ನೀಡಿದ್ದು 'ಕೈಲಾಸ'ದಲ್ಲಿ 1 ಲಕ್ಷ ಜನರು ನೆಲೆಸಬೇಕೆಂದು ಬಯಸಿದ್ದಾರೆ.
"ಕನಿಷ್ಠ 1,00,000 ಜನರು ಕೈಲಾಸದಲ್ಲಿ ನೆಲೆಸಬೇಕೆಂದು ನಾನು ಯೋಜಿಸುತ್ತಿದ್ದೇನೆ" ಎಂದು ನಿತ್ಯಾನಂದ ಶುಕ್ರವಾರ ಅಂತರರಾಷ್ಟ್ರೀಯ ವಲಸಿಗರ ದಿನದಂದು ಘೋಷಿಸಿದರು.
"ಜಾಗತೀಕರಣದ ಕಾರಣದಿಂದಾಗಿ ವಲಸೆ, ಸಾರಿಗೆಯನ್ನು ಪ್ರೋತ್ಸಾಹಿಸಬೇಕು. ಆದರೆ ಮಾನವ ನಿರ್ಮಿತ ವಿಪತ್ತಿನ ಕಾರಣದಿಂದ ಈ ವಲಸೆ ಕಾರ್ಯದತ್ತ ಗಮನ ಹರಿಸಬೇಕು ಎಂದರು.
ಕೈಲಾಸದಲ್ಲಿ ರಿಸರ್ವ್ ಬ್ಯಾಂಕ್ ಅನ್ನು ಸ್ಥಾಪಿಸಿರುವ ನಿತ್ಯಾನಂದ, ಈಗ ತನ್ನ ದೇಶಕ್ಕೆ ಬರುವವರಿಗೆ ವೀಸಾ ನೀಡಲು ಪ್ರಾರಂಭಿಸಿದ್ದಾರೆ. ಇನ್ನು ಈ ಕೈಲಾಸ ಹಿಂದೂ ರಾಷ್ಟ್ರ ಆಸ್ಟ್ರೇಲಿಯಾದಲ್ಲಿ ಇದೆ ಎಂದು ಹೇಳಲಾದರೂ, ಅದು ಸರಿಯಾಗಿ ಯಾವ ಪ್ರದೇಶದಲ್ಲಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಿಂದೆ ಈಕ್ವೇಡಾರ್ ಎಂಬ ದ್ವೀಪವನ್ನು ತಾನು ಖರೀದಿ ಮಾಡಿ ಅಲ್ಲಿ ತನ್ನದೇ ದೇಶವನ್ನು ಸ್ಥಾಪಿಸಿದ್ದೇನೆ ಎಂದು ಹೇಳಿದ್ದ ನಿತ್ಯಾನಂದನ ಹೇಳಿಕೆಗೆ ತದ್ವಿರುದ್ಧವಾಗಿ ಅಲ್ಲಿನ ಸರ್ಕಾರವು ನಾವು ಯಾವುದೇ ದ್ವೀಪವನ್ನು ಮಾರಾಟ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಇನ್ನು ಈಗ ಕೈಲಾಸಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುವುದು ಎಂದು ಹೇಳಿರುವ ನಿತ್ಯಾನಂದ ಸಂದರ್ಶಕರಿಗೆ ತನ್ನ ದೇಶ 'ಕೈಲಾಸ'ದಲ್ಲಿ ಮೂರು ದಿನಗಳಿಗಿಂತ ಅಧಿಕ ಕಾಲ ಉಳಿಯಲು ಅವಕಾಶವಿಲ್ಲ ಎಂದು ಹೇಳಿದ್ದರು.