ನವದೆಹಲಿ, ಡಿ.19 (DaijiworldNews/HR): ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಹಾಗೂ ನರೇಂದ್ರ ಮೋದಿ ಸರಕಾರವನ್ನು ಎದುರಿಸಲು ರಾಹುಲ್ ಗಾಂಧಿ ಅವರೇ ಸೂಕ್ತ ವ್ಯಕ್ತಿ, ನಮ್ಮ ಪಕ್ಷವು ಒಂದು ಕುಟುಂಬವಾಗಿ ಒಗ್ಗಟ್ಟಿನಿಂದ ನಿಂತಿದ್ದು, ಪಕ್ಷದ ಅಧ್ಯಕ್ಷರ ಚುನಾವಣೆ ಘೋಷಣೆಯ ನಂತರ ಯಾವುದೇ ಭಿನ್ನಭಿಪ್ರಾಯಗಳು ಉಂಟಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "2019ರಲ್ಲಿ ಲೋಕಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತಿದ್ದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪರಿಣಾಮ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದುವರಿಯಬೇಕಾಯಿತು, ಪಕ್ಷವನ್ನು ಮುನ್ನಡೆಸಲು ಹಾಗೂ ನರೇಂದ್ರ ಮೋದಿ ಸರಕಾರವನ್ನು ಎದುರಿಸಲು ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ ಎಂಬುದು ನನ್ನ ನಂಬಿಕೆ" ಎಂದರು.
ಇನ್ನು ಇಂದು ಸೋನಿಯ ಗಾಂಧಿ ಭೇಟಿ ಮಾಡುವ ಕಾಂಗ್ರೆಸ್ ನಿಯೋಗದಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಮೇಲ್ಮನೆ ಪಕ್ಷದ ಉಪನಾಯಕ ಆನಂದ್ ಶರ್ಮಾ, ಮಾಜಿ ಸಚಿವ ಪಿ ಚಿದಂಬರಂ, ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್, ಭೂಪಿಂದರ್ ಹೂಡಾ, ಪೃಥ್ವಿರಾಜ್ ಚವಾಣ್ ಮತ್ತು ಶಶಿ ತರೂರ್ ಇರಲಿದ್ದಾರೆ"ಎಂದು ಹೇಳಿದ್ದಾರೆ.