ಶಿವಮೊಗ್ಗ,ಡಿ.18 (DaijiworldNews/HR): ಡಿಸೆಂಬರ್ 15ರಂದು ವಿಧಾನ ಪರಿಷತ್ನಲ್ಲಿ ನಡೆದ ಗಲಾಟೆಗೆ ಬಿಜೆಪಿ ಮತ್ತು ಜೆಡಿಎಸ್ ನೇರ ಕಾರಣವಾಗಿದ್ದು, ಎರಡೂ ಪಕ್ಷಗಳು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ, ಘಟನೆಗೆ ಬಿಜೆಪಿ ಕಾರಣವಾಗಿದ್ದರೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ವಿಧಾನ ಪರಿಷತ್ ಸಭಾಪತಿ ಅವರನ್ನು ಕಲಾಪಕ್ಕೆ ಬಾರದಂತೆ ತಡೆದಿದ್ದಾರೆ. ಬಾಗಿಲು ಮುಚ್ಚಿದ್ದಾರೆ. ಅವರ ಅನುಮತಿ ಇಲ್ಲದೇ ಉಪ ಸಭಾಪತಿಗಳನ್ನು ಪೀಠದ ಮೇಲೆ ಕೂರಿಸಿ, ಕಲಾಪ ನಡೆಸಲು ಹೊರಟ ಬಿಜೆಪಿ ಸದಸ್ಯರ ವರ್ತನೆ ಖಂಡನೀಯ" ಎಂದರು.
ಇನ್ನು "ಕಾನೂನು ಸಚಿವ ಮಾಧುಸ್ವಾಮಿ ಅವರೇ ಸಭಾಪತಿ ಪೀಠದಲ್ಲಿ ಉಪ ಸಭಾಪತಿ ಅವರನ್ನು ಅಕ್ರಮವಾಗಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಇದರಲ್ಲಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರ ಪಾತ್ರವೂ ಇದೆ. ಈ ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿಯೊಂದಿಗೆ ಜೆಡಿಎಸ್ ಕೂಡ ಸಭಾಪತಿ ಸ್ಥಾನ ಪಡೆಯಲು ಕೈಜೋಡಿಸಿದೆ ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ಜನರಿಗೆ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.