ಮೈಸೂರು, ಡಿ.18 (DaijiworldNews/PY): "ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಾನು ಇನ್ನೂ ತೀರ್ಮಾನ ಕೈಗೊಂಡಿಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ನಾನೂ ತೀರ್ಮಾನ ಮಾಡಿಲ್ಲ. ಈ ಬಗ್ಗೆ ಇನ್ನು ಆರು ತಿಂಗಳು ಬಿಟ್ಟು ನಿರ್ಧರಿಸುತ್ತೇನೆ" ಎಂದರು.
ಚಾಮುಂಡೇಶ್ವರಿಯಲ್ಲಿ ಪರ್ಯಾಯ ನಾಯಕನ ಬಗೆಗಿನ ಕೂಗಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇದೊಂದು ಉತ್ತಮವಾದ ಬೆಳವಣಿಗೆಯಾಗಿದೆ. ನಾನು ಶಾಶ್ವತವಲ್ಲ. ಈ ನಿಟ್ಟಿನಲ್ಲಿ ಪರ್ಯಾಯ ನಾಯಕ ಬೇಕು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನು ಬರುತ್ತಿಲ್ಲ ಈ ವಿಚಾರ ಸತ್ಯ. ನಾನು ಸೋತ ನಂತರ ಇಲ್ಲಿ ಸಭೆ ನಡೆದಿಲ್ಲ" ಎಂದು ಹೇಳಿದರು.
ಸಭಾಪತಿಯಿಂದ ಶೋಕಾಸ್ ನೋಟಿಸ್ ವಿಚಾರದ ಬಗ್ಗೆ ಮಾತನಾಡಿದ ಅವರು, "ಸಭಾಪತಿ ಅವರಿಗೆ ನೋಟಿಸ್ ಜಾರಿ ಮಾಡುವ ಎಲ್ಲಾ ಅಧಿಕಾರವಿದೆ. ಕಾರ್ಯದರ್ಶಿ ಸಭಾಪತಿಯವರ ಅಧೀನದಲ್ಲಿ ಬರುತ್ತಾರೆ. ಬಿಜೆಪಿಯವರು ಹೇಳಿದಂತೆ ಕಾರ್ಯದರ್ಶಿ ಕೇಳಿದರೆ ಸುಮ್ಮನೆ ಇರಬೇಕಾ?" ಎಂದು ಕೇಳಿದರು.
ಜನವರಿಯಿಂದ ಶಾಲಾರಂಭ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇದೇ ರೀತಿಯಾಗಿ ಸೋಂಕು ನಿಯಂತ್ರಣದಲ್ಲಿದ್ದರೆ ಶಾಲೆ ಪುನರಾರಂಭ ಮಾಡಲಿ. ಆದರೆ, ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳುವುದು ಮುಖ್ಯ. ಕೊರೊನಾದ ಎರಡನೇ ಅಲೆ ಬೀಸಿದರೆ ಶಾಲೆ ಪುನರಾರಂಭ ಮಾಡುವುದು ಬೇಡ" ಎಂದರು.