ಬೆಂಗಳೂರು, ಡಿ.18 (DaijiworldNews/PY): ಡಿ.19ರ ಶನಿವಾರದಂದು ರಾಜ್ಯದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ತರಗತಿಗಳ ಪುನರಾರಂಭಕ್ಕೆ ಸಂಬಂಧಪಟ್ಟಂತೆ ಸಿಎಂ ಬಿಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಈ ಸಭೆ ಶನಿವಾರ ಮಧ್ಯಾಹ್ನ ಕೃಷ್ಣಾದಲ್ಲಿ ನಡೆಯಲಿದ್ದು, ಸಭೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ನಾಳೆ ನಡೆಯುವ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ತರಗತಿಗಳ ಸ್ಥಿತಿ-ಗತಿ ನೋಡಿಕೊಂಡು ಇನ್ನುಳಿದ ತರಗತಿಗಳನ್ನು ಪುನರಾರಂಭ ಮಾಡುವ ಬಗ್ಗೆ ಹಾಗೂ ವಿದ್ಯಾಗಮ ಯೋಜನೆ ಜಾರಿಗೆ ಸಂಬಂಧಪಟ್ಟಂತೆ ಚರ್ಚೆ ನಡೆಯಲಿದೆ.
"ಶಾಲಾ-ಕಾಲೇಜು ತರಗತಿಯು ನಡೆಯುವ ಸಂಧರ್ಭ ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚನೆ ನೀಡಬೇಕು" ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ಪತ್ರ ಬರೆದಿದ್ದಾರೆ.
ಈ ಹಿನ್ನೆಲೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ತರಗತಿಗಳು ಜ.1ರಿಂದ ಪ್ರಾರಂಭವಾಗುವುದು ಬಹುತೇಕ ಖಚಿತವಾಗುವ ಸಾಧ್ಯತೆ ಇದೆ.