ಮೈಸೂರು, ಡಿ.18 (DaijiworldNews/HR): ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಅವರಿಗೆ ಬಿಜೆಪಿಯವರು ಮುಂಬೈನಲ್ಲಿ ನೀಡಿರುವ ಮಿಠಾಯಿ ಯಾವುದು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ವಕ್ತಾರ ಎನ್.ಆರ್.ರವಿಚಂದ್ರೇಗೌಡ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ವಿಶ್ವನಾಥ್ ಅವರು ಕಾಂಗ್ರೆಸ್ನಲ್ಲಿದ್ದಾಗ ಕಾಂಗ್ರೆಸ್ ನನ್ನ ತಾಯಿ ಅನ್ನುತ್ತಿದ್ದೀರಿ, ಬಳಿಕ ಜೆಡಿಎಸ್ ಗೆ ಬಂದಾಗ ದೇವೇಗೌಡರು ನನ್ನ ತಂದೆಗೆ ಸಮಾನರೆನ್ನುತ್ತಿದ್ದೀರಿ, ಇದೀಗ ಬಿಜೆಪಿಗೆ ಹೋಗಿ ನರೇಂದ್ರ ಮೋದಿಯವರು ಏನಾಗಬೇಕು? ಈಗ ತಾವು ಯಾರ ಮಗು ಎಂಬುದನ್ನು ತಿಳಿಸಿ" ಎಂದರು.
ಇನ್ನು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ವಿಶ್ವನಾಥ್ ಅವರನ್ನು ಅನರ್ಹ ಶಾಸಕನೆಂದು ತೀರ್ಪು ನೀಡಿದೆ. ಈಗ ಹೈಕೋರ್ಟ್ ಕೂಡ ಅನರ್ಹ ಶಾಸಕನೆಂದು ತೀರ್ಪು ನೀಡಿದೆ, ಹಾಗಾಗಿ ನಿಮಗೆ ಸ್ವಾಭಿಮಾನವಿದ್ದರೆ ಕೋರ್ಟ್ ನ ಆದೇಶದ ಬಗ್ಗೆ ಗೌರವವಿದ್ದರೆ ಈ ಕೂಡಲೇ ತಮ್ಮ ನಾಮನಿರ್ದೇಶನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಗೌರವವನ್ನು ಉಳಿಸಿಕೊಳ್ಳಿ" ಎಂದು ಹೇಳಿದ್ದಾರೆ.