ಪಟ್ನಾ,ಡಿ.18 (DaijiworldNews/HR): ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಗಣನೀಯ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಲು ಎದುರು ನೋಡುತ್ತಿರುವುದಾಗಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹೇಳಿದೆ.
ಈ ಕುರಿತು ಮಾತನಾಡಿರುವ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗುಲಾಮ್ ರಸೂಲ್ ಬಲಿಯಾವಿ "ಪಶ್ಚಿಮ ಬಂಗಾಳದ ಪಕ್ಷದ ಘಟಕವು ಕನಿಷ್ಠ 75 ಸ್ಥಾನಗಳಿಗೆ ಸ್ಪರ್ಧಿಸಲು ಬಯಸಿದ್ದು, ಪಕ್ಷದ ನಾಯಕತ್ವದ ನಿರ್ಧಾರದ ಮೇಲೆ ಸ್ಪರ್ಧೆಯ ಸಂಖ್ಯೆ ಹೆಚ್ಚಾಗಬಹುದು" ಎಂದರು.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಉತ್ತಮ ಸಾಧನೆ ಮಾಡಿರುವ ಬಿಜೆಪಿ, ವಿಧಾನಸಭೆ ಚುನಾವಣೆಯಲ್ಲೂ ಉತ್ಸಾಹದಲ್ಲಿದ್ದು, ಈ ಮೂಲಕ ಮಮತಾ ಬ್ಯಾನರ್ಜಿ ಅವರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯದಂತೆ ಮಾಡುವತ್ತ ಶ್ರಮಿಸುತ್ತಿದೆ.
ಇನ್ನು ಬಿಹಾರದಂತೆಯೇ ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿಯೊಂದಿಗಿನ ಮೈತ್ರಿ ಮುಂದುವರಿಯುವುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಗುಲಾಮ್ ರಸೂಲ್, "ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನೂ ಜೊತೆಗೇ ಕರೆದೊಯ್ಯುವ ವಿಷಯದಲ್ಲಿ ಬಿಜೆಪಿ ಯೋಚಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ, ಒಂದು ವೇಳೆ ಹಾಗೆ ಆಗದೇ ಹೋದರೆ, ಪ್ರತಿ ಪಕ್ಷಕ್ಕೂ ತನ್ನ ನೆಲೆ ವಿಸ್ತರಿಸುವ ಹಕ್ಕಿದೆ" ಎಂದು ಹೇಳಿದ್ದಾರೆ.