ಬೆಂಗಳೂರು, ಡಿ.18 (DaijiworldNews/HR): ಅಧಿವೇಶನದಲ್ಲಿ ನಡೆದ ಗಲಾಟೆಯಲ್ಲಿ ಕರ್ತವ್ಯಲೋಪ ಎಸಗಿದ ಮತ್ತು ಬೇಜವಾಬ್ದಾರಿಯಿಂದ ವರ್ತಿಸಿದ ಆರೋಪದಲ್ಲಿ ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಶೋಕಾಸ್ ನೋಟಿಸ್ ನೀಡಿ, ದಾಖಲೆಗಳೊಂದಿಗೆ 48 ಗಂಟೆಗಳೊಳಗೆ ಉತ್ತರ ಕೊಡುವಂತೆ ಸೂಚಿಸಿದ್ದಾರೆ.
ಸಭಾಪತಿ ನೀಡಿರುವ ನೋಟಿಸ್ನಲ್ಲಿ, "ಡಿ.15ರಂದು ಕೋರಂ ಬೆಲ್ ಮುಗಿಯುವ ಮುನ್ನ ಉಪ ಸಭಾಪತಿ ಪೀಠ ಏರಿದ್ದರು. ಬಳಿಕ ನಾನು ಸದನಕ್ಕೆ ಬರದಂತೆ ಬಾಗಿಲು ಮುಚ್ಚಿದ್ದರು, ನಿಯಮವನ್ನು ಉಲ್ಲಂಘಿಸಿ ಪೀಠದಲ್ಲಿ ಕುಳಿತಿದ್ದ ಉಪ ಸಭಾಪತಿಯವರಿಗೆ ದಾಖಲೆಗಳನ್ನು ಒದಗಿಸುವ ಮೂಲಕ, ಕಾನೂನಿಗೆ ವಿರುದ್ಧವಾಗಿ ಸದನ ನಡೆಸುವ ಚಿತಾವಣೆಯಲ್ಲಿ ಭಾಗಿಯಾಗಿರುವುದನ್ನು ಹಲವು ಸಾಕ್ಷ್ಯಗಳಲ್ಲಿ ಗಮನಿಸಿರುತ್ತೇನೆ" ಎಂದು ಉಲ್ಲೇಖಿಸಿದ್ದಾರೆ.
ಇನ್ನು "ನಾನು ಸದನಕ್ಕೆ ಬರದಂತೆ ತಡೆದಿರುವುದು ಮತ್ತು ಕಲಾಪಗಳ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ವ್ಯತಿರಿಕ್ತವಾಗಿ ವರ್ತಿಸಿರುವ ಘಟನೆ ಕುರಿತು ಸಮೂಹ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು,ಈ ಘಟನೆಯಿಂದ ಶತಮಾನದ ಇತಿಹಾಸವುಳ್ಳ ವಿಧಾನ ಪರಿಷತ್ತಿನ ಗೌರವ, ಘನತೆ ಮತ್ತು ಸಂಪ್ರದಾಯಕ್ಕೆ ಧಕ್ಕೆಯಾಗಿದೆ" ಎಂದು ಪತ್ರದಲ್ಲಿ ಬರೆದಿದ್ದಾರೆ.