ನವದೆಹಲಿ, ಡಿ.18 (DaijiworldNews/PY): "ಮುಂದಿನ ಎರಡು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾ ಇರುವುದಿಲ್ಲ" ಎಂದು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಅಸೋಚಾಮ್ ಸಂಸ್ಥಾಪನಾ ವಾರ ಆಚರಣೆಯ ಸಂದರ್ಭ ಮಾತನಾಡಿದ ಅವರು, "ಹೆದ್ದಾರಿಗಳಲ್ಲಿ ಹೊಸ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರವು ತಯಾರಿ ನಡೆಸುತ್ತಿದೆ. ಸರ್ಕಾರವು ಹೊಸ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಅಂತಿಮಗೊಳಿಸಿದೆ. ಇದು ರಷ್ಯಾ ಸರ್ಕಾರದ ಸಹಯೋಗದಲ್ಲಿದೆ" ಎಂದಿದ್ದಾರೆ.
"ಹೊಸ ಟೋಲ್ ವ್ಯವಸ್ಥೆಯಲ್ಲಿ ಹಣ ಸಂಗ್ರಹಣೆ ಮಾಡಲು ವಾಹನಗಳು ಟೋಲ್ ಪ್ಲಾಜಾಗಳಲ್ಲಿ ನಿಲ್ಲಬೇಕಾಗಿಲ್ಲ. ಬದಲಾಗಿ, ಈ ವ್ಯವಸ್ಥೆಯಲ್ಲಿ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಸಂದಾಯವಾಗಲಿದೆ" ಎಂದು ತಿಳಿಸಿದ್ದಾರೆ.
"ಇತ್ತೀಚಿಗಿನ ಹೊಸ ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳು ಜಿಪಿಎಸ್ ಹೊಂದಿರುತ್ತವೆ. ಹಳೆಯ ವಾಹನಗಳಿಗೂ ಕೂಡಾ ಜಿಪಿಎಸ್ ಅಳವಡಿಸುವ ವಿಚಾರವಾಗಿ ಸರ್ಕಾರ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ" ಎಂದಿದ್ದಾರೆ.
"ಭಾರತದಲ್ಲಿ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತಂದ ಕೇವಲ ಐದು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 1.34 ಲಕ್ಷ ಕೋಟಿ ರೂ.ಗಳ ಆದಾಯವನ್ನು ಗಳಿಸಬಹುದು. ಮಾರ್ಚ್ 2021ರ ವೇಳೆಗೆ ಟೋಲ್ ಸಂಗ್ರಹ 34,000 ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆಯಿದೆ" ಎಂದು ತಿಳಿಸಿದ್ದಾರೆ.
"ಮುಂದಿನ ಎರಡು ವರ್ಷಗಳಲ್ಲಿ ಭಾರತವು ಟೋಲ್ ಬೂತ್ ರಹಿತ ಹೆದ್ದಾರಿಗಳನ್ನು ಹೊಂದಲಿದೆ. ಜಿಪಿಎಸ್ ವ್ಯವಸ್ಥೆಯ ಮೂಲಕ ವಾಹನಗಳನ್ನು ಟ್ರ್ಯಾಕ್ ಮಾಡಲಾಗುವುದು. ಹಾಗೂ ಬಾಕಿ ಟೋನ್ ಹಣವನ್ನು ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಸಂದಾಯವಾಗಲಿದೆ" ಎಂದು ಹೇಳಿದ್ದಾರೆ.