ಬೆಂಗಳೂರು, ಡಿ.18 (DaijiworldNews/PY): "ರೈತರ ಹೋರಾಟವನ್ನು 'ಖಲಿಸ್ತಾನಿ' ಹಾಗೂ 'ದೇಶದ್ರೋಹಿ'ಗಳ ಹೋರಾಟ ಎಂದು ಬಿಂಬಿಸಲು ಹೊರಟಿದ್ದ ಬಿಜೆಪಿ ನಾಯಕರಿಗೆ ಆತ್ಮಸಾಕ್ಷಿ ಎಂಬುದಿದ್ದರೆ ರೈತರ ಬಳಿ ಕ್ಷಮೆ ಕೇಳಲಿ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "3 ಕೃಷಿ ಕಾಯ್ಧೆಗಳ ವಿರುದ್ಧದ ರೈತರ ಪ್ರತಿಭಟನೆ ಸುಪ್ರೀಂ ಕೋರ್ಟ್ ಪ್ರಕಾರ ನ್ಯಾಯಯುತವಾಗಿದೆ ಎಂದರೆ, ಕೇಂದ್ರದ ಈ ಕಾಯ್ಧೆಗಳು ಮಾರಕ ಎಂಬುದು ಅದರರ್ಥ. ರೈತರ ಹೋರಾಟವನ್ನು 'ಖಲಿಸ್ತಾನಿ' ಹಾಗೂ 'ದೇಶದ್ರೋಹಿ'ಗಳ ಹೋರಾಟ ಎಂದು ಬಿಂಬಿಸಲು ಹೊರಟಿದ್ದ ಬಿಜೆಪಿ ನಾಯಕರಿಗೆ ಆತ್ಮಸಾಕ್ಷಿ ಎಂಬುದಿದ್ದರೆ ರೈತರ ಬಳಿ ಕ್ಷಮೆ ಕೇಳಲಿ" ಎಂದಿದ್ದಾರೆ.
ಕೇಂದ್ರ ಸರಕಾರ ಅನುಷ್ಠಾನಕ್ಕೆ ತಂದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರೋಧ ಪ್ರತಿಭಟನೆ ನಡೆಸಲು ರೈತರಿಗೆ ಎಲ್ಲಾ ರೀತಿಯ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರತಿಭಟನೆಯ ವೇಳೆ ಜನರ ಮೂಲಭೂತ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಭಟನಾಕಾರರಿಗಿದೆ. ಆದುದರಿಂದ ಪ್ರತಿಭಟನೆಯಲ್ಲಿ ಯಾವ ರೀತಿ ಬದಲಾವಣೆಗಳನ್ನು ತರಲಾಗುವುದು ಎಂದು ರೈತ ಸಂಘಟನೆಗಳು ತಿಳಿಸಬೇಕಾಗಿದೆ. ಚರ್ಚೆಗಳ ಮೂಲಕ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎಂದ ನ್ಯಾಯಾಲಯ ಈ ಕುರಿತು ಅಂತಿಮ ನಿರ್ಧಾರವಾಗುವವರೆಗೆ ವಿವಾದಿತ ಕೃಷಿ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರಬಾರದು ಎಂದು ಕೇಂದ್ರ ಸರಕಾರಕ್ಕೆ ತಿಳಿಸಿದೆ.
ದೆಹಲಿ ಗಡಿಭಾಗಗಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಕೊನೆಗೊಳಿಸಬೇಕು ಎಂಬ ಕೋರಿಕೆಯೊಡ್ಡಿ ದಾಖಲಾದ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಲಯ ಕೃಷಿಕರ ಸಮಸ್ಯೆಗಳನ್ನು ಅಧ್ಯಯನ ಮಾಡಲು ಹೊಸ ಸಮಿತಿಯೊಂದನ್ನು ರೂಪಿಸುವಂತೆ ಹಾಗೂ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಕೊನೆಗೊಳಿಸುವಂತೆ ಆದೇಶಿಸಿದೆ.