ಬೆಂಗಳೂರು, ಡಿ.17 (DaijiworldNews/PY): ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಾಹ್ಮಣ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಬಹುದಾದ ಪಠ್ಯದ ಭಾಗವನ್ನು ಕೂಡಲೇ ತೆಗೆದುಹಾಕುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ ಪಾಠ-7ರ ಅಂಶಗಳನ್ನು ಉಲ್ಲೇಖಿಸಿ ಈ ಪಠ್ಯಭಾಗ ಬ್ಯಾಹ್ಮಣ ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತದೆ ಎನ್ನುವ ವರದಿಗಳ ಹಿನ್ನೆಲೆ ಪಠ್ಯಭಾಗದಿಂದ ಇದನ್ನು ತಕ್ಷಣವೇ ತೆಗೆಯುವಂತೆ ಗುರುವಾರವೇ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದಿದ್ದಾರೆ.
"ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅಗತ್ಯವಾದ ಸುತ್ತೋಲೆ ಹೊರಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಟಿಪ್ಪಣಿ ನೀಡಲಾಗಿದೆ. ಪಠ್ಯಗಳಲ್ಲಿ ಇರಬಹುದಾದ ಈ ರೀತಿಯಾದ ಸಂಕೀರ್ಣ ವಿಷಯಗಳ ಬಗ್ಗೆ ಶಿಕ್ಷಕರು ಹಾಗೂ ವಿಷಯ ತಜ್ಞರನ್ನು ಒಳಗೊಂಡಂತ ಸಮಿತಿಯನ್ನು ರಚನೆ ಮಾಡಿ ಅವರಿಂದ ಈ ಬಗ್ಗೆ ವರದಿ ಪಡೆದು 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. ವರದಿ ಪಡೆದ ಬಳಿಕ, ಆ ರೀತಿಯಾದ ಪಠ್ಯಭಾಗಗಳಿದ್ದಲ್ಲಿ ಅದರ ಪರಾಮರ್ಶೆಗಾಗಿ ತಜ್ಞರ ಸಮಿತಿಯನ್ನು ಕೂಡಾ ನೇಮಿಸಲಾಗುವುದು" ಎಂದು ಹೇಳಿದ್ದಾರೆ.
"ಈ ಬಗ್ಗೆ ನನಗೆ ಮಂತ್ರಾಲಯ ಶ್ರೀಕ್ಷೇತ್ರದ ಸ್ವಾಮೀಜಿಯವರು ಕರೆ ಮಾಡಿ ತಿಳಿಸಿದ್ದಾರೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಯಾವುದೇ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಕೈಗೊಂಡಿಲ್ಲ" ಎಂದಿದ್ದಾರೆ.