ನವದೆಹಲಿ, ಡಿ.17 (DaijiworldNews/SB): ಕೇಂದ್ರ ಸರಕಾರ ಅನುಷ್ಟಾನಕ್ಕೆ ತಂದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರೋಧ ಪ್ರತಿಭಟನೆ ನಡೆಸಲು ರೈತರಿಗೆ ಎಲ್ಲಾ ರೀತಿಯ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರತಿಭಟನೆಯ ವೇಳೆ ಜನರ ಮೂಲಭೂತ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಭಟನಾಕಾರರಿಗಿದೆ. ಆದುದರಿಂದ ಪ್ರತಿಭಟನೆಯಲ್ಲಿ ಯಾವರೀತಿ ಬದಲಾವಣೆಗಳನ್ನು ತರಲಾಗುವುದು ಎಂದು ರೈತ ಸಂಘಟನೆಗಳು ತಿಳಿಸಬೇಕಾಗಿದೆ. ಚರ್ಚೆಗಳ ಮೂಲಕ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎಂದ ನ್ಯಾಯಾಲಯ ಈ ಕುರಿತು ಅಂತಿಮ ನಿರ್ಧಾರವಾಗುವವರೆಗೆ ವಿವಾದಿತ ಕೃಷಿ ಕಾಯ್ದೆಗಳನ್ನು ಅನುಷ್ಟಾನಕ್ಕೆ ತರಬಾರದು ಎಂದು ಕೇಂದ್ರಸರಕಾರಕ್ಕೆ ತಿಳಿಸಿದೆ.
ಶಾಂತ ರೀತಿಯಲ್ಲಿ ಕೃಷಿಕರು ಪ್ರತಿಭಟನೆಯನ್ನು ನಡೆಸಬಹುದಾಗಿದೆ. ಪೊಲೀಸರು ಇವರನ್ನು ತಡೆಯುವಂತಿಲ್ಲ. ದೆಹಲಿಯ ರಸ್ತೆಗಳನ್ನು ತಡೆಯದೆ, ಜನರ ಜೀವಕ್ಕೆ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗದಂತೆ ಪ್ರತಿಭಟನೆಯನ್ನು ಮುಂದುವರೆಸಬಹುದಾಗಿದೆ ಎಂದು ಚೀಫ್ ಜಸ್ಟೀಸ್ ಎಸ್ ಎ ಬೋಬ್ಡೆ ಅಭಿಪ್ರಾಯಪಟ್ಟರು.
ದೆಹಲಿ ಗಡಿಭಾಗಗಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಕೊನೆಗೊಳಿಸಬೇಕು ಎಂಬ ಕೋರಿಕೆಯೊಡ್ಡಿ ದಾಖಲಾದ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಲಯ ಕೃಷಿಕರ ಸಮಸ್ಯೆಗಳನ್ನು ಅಧ್ಯಯನ ಮಾಡಲು ಹೊಸ ಸಮಿತಿಯೊಂದನ್ನು ರೂಪಿಸುವಂತೆ ಹಾಗೂ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಕೊನೆಗೊಳಿಸುವಂತೆ ಆದೇಶಿಸಿದೆ.