ಬೆಂಗಳೂರು, ಡಿ.17 (DaijiworldNews/PY): ‘ಮಿಷನ್ ಬೆಂಗಳೂರು- 2022’ ಅಡಿಯಲ್ಲಿ 8 ಕ್ಷೇತ್ರಗಳಲ್ಲಿ ಬೆಂಗಳೂರಿನ ಸಮಗ್ರವಾದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ‘ಮಿಷನ್ ಬೆಂಗಳೂರು- 2022’ ಬಗೆಗಿನ ಸಂವಾದದಲ್ಲಿ ಮಾತನಾಡಿದ ಅವರು, "ಎರಡು ವರ್ಷಗಳಲ್ಲಿ ಬೆಂಗಳೂರಿನ ಸಂಪೂರ್ಣವಾದ ಚಹರೆ ಬದಲಾಗಲಿದೆ. ರಾಜ ಕಾಲುವೆಗಳ ಸಮಗ್ರ ನಿರ್ವಹಣೆ ಸೇರಿದಂತೆ ಕೆರೆಗಳ ಅಭಿವೃದ್ಧಿ, ಸುಗಮ ಸಾರಿಗೆ ಹಾಗೂ ಇತರೆ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು. ನೂತನ ಉದ್ಯಾನಗಳು ಹಾಗೂ ಬೃಹತ್ ವೃಕ್ಷೋದ್ಯಮಗಳನ್ನೂ ಕೂಡಾ ನಿರ್ಮಾಣ ಮಾಡಲಾಗುವುದು" ಎಂದು ಹೇಳಿದರು.
"ಇನ್ನು ಮೈಸೂರು ಲ್ಯಾಂಪ್ಸ್ ಕಾರ್ಖಾನೆ ಹಾಗೂ ಎನ್ಜಿಇಎಫ್ ಕಾರ್ಖಾನೆಗಳ ಜಮೀನಿನಲ್ಲಿ ಕಲೆ, ರಂಗಭೂಮಿಗೆ ಸಂಬಂಧಪಟ್ಟಂತೆ ಮ್ಯೂಸಿಯಂ ನಿರ್ಮಾಣ ಮಾಡಲಾಗುವುದು. ನಗರದಲ್ಲಿ ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಪ್ರಮುಖ 12 ಮಾರ್ಗಗಳನ್ನು ಕಾರಿಡಾರ್ಗಳಾಗಿ ಅಭಿವೃದ್ಧಿ ಮಾಡಲಾಗುವುದು" ಎಂದು ತಿಳಿಸಿದರು.
"ಘನ ತ್ಯಾಜ್ಯ ವಿಲೇವಾರಿಗಾಗಿ ನನ್ನ ಕಸ-ನನ್ನ ಜವಾಬ್ದಾರಿ ಎನ್ನುವ ಯೋಜನೆಯನ್ನು ರೂಪಿಸಲಾಗಿದೆ. ಸಾರ್ವಜನಿಕೆ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ತರಬೇತಿಯನ್ನು ಕೂಡಾ ನೀಡಲಾಗುವುದು" ಎಂದು ಹೇಳಿದರು.