ನವದೆಹಲಿ, ಡಿ.17 (DaijiworldNews/HR): ಮಾಜಿ ಸಚಿವ ಜೀವರಾಜ್ ಆಳ್ವಾ ಅವರ ಪುತ್ರ ಸ್ಯಾಂಡಲ್ವುಡ್ ಡ್ರಗ್ ಪ್ರಕರಣದ ಆರೋಪಿ ಆದಿತ್ಯ ಆಳ್ವಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.
ಆದಿತ್ಯ ಆಳ್ವಾ ಡ್ರಗ್ಸ್ ಪ್ರಕರಣ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿಎಫ್ಐಆರ್ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇನ್ನು ಮುಂಬೈನಲ್ಲಿರುವ ಆದಿತ್ಯ ಆಳ್ವಾ ಅವರ ಭಾಮೈದ ನಟ ವಿವೇಕ್ ಒಬೆರಾಯ್ ನಿವಾಸದಲ್ಲೂ ಆದಿತ್ಯಾ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಒಬೆರಾಯ್ ಪತ್ನಿ ಹಾಗೂ ಆದಿತ್ಯಾ ಆಳ್ವಾ ಸಹೋದರಿಯಾಗಿರುವ ಪ್ರಿಯಾಂಕಾ ಆಳ್ವಾರಿಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು.
ಈ ಸಂಬಂಧ ಆದಿತ್ಯ ಆಳ್ವಾ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಗೆ ನಿರಾಕರಿಸಿರುವ ಸುಪ್ರೀಂಕೋರ್ಟ್ ಅಗತ್ಯವಿದ್ದರೆ ಹೈಕೋರ್ಟ್ ಮೊರೆ ಹೋಗುವಂತೆ ತಿಳಿಸಿದೆ.