ಬಳ್ಳಾರಿ, ಡಿ.17 (DaijiworldNews/PY): "ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಅವರು ಇಂದು ಅಧೋಗತಿಯತ್ತ ಸಾಗಿಸುತ್ತಿದ್ದಾರೆ. ರೈತಪರ ಹಾಗೂ ಜನಪರ ಕಾನೂನುಗಳನ್ನು ಜನವಿರೋಧಿಯಾಗಿ ಮಾರ್ಪಾಡು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ಭಸ್ಮಾಸುರ" ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿದ್ದರು. ಆದರೆ, ಅವರು ನೀಡಿರುವ ಭರವಸೆ ಈಡೇರಿಲ್ಲ. ನೋಟಿ ರದ್ಧತಿಯಿಂದ ಕಪ್ಪು ಹಣದ ಪತ್ತೆ ಕಾರ್ಯವೂ ಆಗಿಲ್ಲ" ಎಂದಿದ್ದಾರೆ.
"ಇಂದಿರಾಗಾಂಧಿ ಅವರ ಆಡಳಿತ ಅವಧಿಯಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದರಿಂದ ರಾಜ್ಯದ ಸಾವಿರಾರು ರೈತರ ಬದುಕನ್ನು ಕಾಂಗ್ರೆಸ್ ಸರ್ಕಾರ ಉತ್ತಮವಾಗಿಸಿತ್ತು. ಆದರೆ, ಇದೀಗ ಕೃಷಿ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಮುಖೇನ ಪ್ರಧಾನಿ ಮೋದಿ ಸರ್ಕಾರ ರೈತರ ಜೀವನದ ಮೇಲೆ ಮರಣ ಶಾಸನ ಬರೆದಿದೆ. ಈ ರೀತಿಯಾದ ತೀರ್ಮಾನಗಳಿಂದ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯಲಿದೆ. ಇದರ ಸೂಚನೆ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಮುಷ್ಕರದ ಮೂಲಕವೇ ಸಿಕ್ಕಿದೆ" ಎಂದು ಹೇಳಿದ್ದಾರೆ.
"ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡು ಕೂಡಾ ಜನವಿರೋಧಿ ನೀತಿಗಳ ಅನುಷ್ಠಾನ ಮಾಡುತ್ತಿದೆ. ಸಿಎಂ ಬಿಎಸ್.ಯಡಿಯೂರಪ್ಪ ಅವರು ಕೂಡಾ ಪ್ರಧಾನಿ ಮೋದಿ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.