ಧಾರವಾಡ,ಡಿ.17 (DaijiworldNews/HR): ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದು, ಆರೋಪಿ ಬಸವರಾಜ ಮುತ್ತಗಿ ಸೇರಿ ವಿಜಯ ಕುಲಕರ್ಣಿ, ನಟರಾಜ್ ಸೇರಿದಂತೆ ಹಲವರನ್ನು ಠಾಣೆಗೆ ಕರೆಸಿ ಸಿಬಿಐ ವಿಚಾರಣೆ ಮಾಡಿದೆ.
ಈ ಕುರಿತು ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಮುತ್ತಗಿ, "ನನ್ನ ಹತ್ಯೆಗೂ ಸುಪಾರಿ ಕೊಟ್ಟಿದ್ದರು ಎಂಬ ವಿಷಯವನ್ನು ಈಗಲೂ ಜೀರ್ಣಿಸಿಕೊಳ್ಳಲು ಆಗುತ್ತಲೇ ಇಲ್ಲ, ಕೆಲವರಿಗೆ ಒಂದಿಷ್ಟು ದೌರ್ಬಲ್ಯಗಳಿರುತ್ತವೆ. ನಾವು ಭಾವನೆಗಳಲ್ಲಿ ಬದುಕುವವರು. ಆದರೆ ಕೆಲವರಿಗೆ ಛಾಡಿ ಕೇಳುವ ದೌರ್ಬಲ್ಯ ಇರುತ್ತದೆ. ಆ ಛಾಡಿ ಕೇಳಿದ್ದರಿಂದಲೇ ಹೀಗೆ ಆಗಿರಬಹುದು. ಚಂದ್ರಶೇಖರ ಇಂಡಿ ಅವರದ್ದು ಮಹಾಭಾರತದ ಶಕುನಿಯ ಪಾತ್ರ. ನಮ್ಮೆಲ್ಲರ ಬದುಕಿನ ಚಂದು ಮಾಮಾರ ಪಾತ್ರ ಪ್ರವೇಶ ಪಡೆದು ಎಲ್ಲರ ಜೀವನವೂ ಹಾಳು ಮಾಡಿಬಿಟ್ಟಿವೆ" ಎಂದರು.
ಇನ್ನು ವಿಚಾರಣೆ ಮುಗಿಸಿ ಹೊರ ಬಂದ ವಿಜಯ ಕುಲಕರ್ಣಿ, ಮುತ್ತಗಿ ಹತ್ಯೆಯ ಸುಪಾರಿ ವಿಷಯವನ್ನು ಅಲ್ಲಗೆಳೆದಿದ್ದು, ಇದು ಸತ್ಯಕ್ಕೆ ದೂರವಾದ ವಿಷಯವೆಂದು ಹೇಳಿದ್ದಾರೆ.