ಬೆಂಗಳೂರು, ಡಿ.17 (DaijiworldNews/PY): ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿದ್ದ ಸಿಖ್ ಧರ್ಮಗುರುವೊಬ್ಬರು ಸಿಂಘು ಗಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯ ದಿನೇಶ್ ಗುಂಡೂರಾವ್, "ರೈತರ ವಿಚಾರದಲ್ಲಿ ಕೇಂದ್ರದ ನಡೆ ಕ್ರೌರ್ಯದ ಪರಮಾವಧಿ. ಸುಪ್ರೀಂ ಕೋರ್ಟ್ ಚಳವಳಿಯನ್ನು ರಾಷ್ಟ್ರೀಯ ಬಿಕ್ಕಟ್ಟು" ಎಂದು ಅಭಿಪ್ರಾಯ ಪಟ್ಟಿದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರೈತರ ವಿಚಾರದಲ್ಲಿ ಕೇಂದ್ರದ ನಡೆ ಕ್ರೌರ್ಯದ ಪರಮಾವಧಿ. ಸುಪ್ರೀಂ ಕೋರ್ಟ್ ಚಳವಳಿಯನ್ನು ರಾಷ್ಟ್ರೀಯ ಬಿಕ್ಕಟ್ಟು ಎಂದು ಅಭಿಪ್ರಾಯ ಪಟ್ಟಿದೆ. ನನ್ನ ಪ್ರಕಾರ ಇದು ರಾಷ್ಟ್ರೀಯ ಬಿಕ್ಕಟ್ಟಲ್ಲ,ಇದೊಂದು ರಾಷ್ಟ್ರೀಯ ದುರಂತ. ಕಾರ್ಪೊರೇಟ್ ಕುಳಗಳ ಮುಂದೆ ಸೊಂಟ ಬಗ್ಗಿಸಿರುವ ಕೇಂದ್ರಕ್ಕೆ ಇನ್ನೆಷ್ಟು ರೈತರ ಬಲಿ ಬೇಕಾಗಿದೆ?" ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿದ್ದ ಕರ್ನಾಲ್ ಜಿಲ್ಲೆಯ ನಿಸ್ಸಿಂಗ್ ಪ್ರದೇಶದ ಸಿಂಗ್ರಾ ಗ್ರಾಮದ ಸಂತ ರಾಮ್ ಸಿಂಗ್ ಅವರು ಸಿಂಘು ಗಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಮ್ ಸಿಂಗ್ ಅವರು ಬರೆದಿದ್ದ ಕೈಬರಹದ ಟಿಪ್ಪಣಿಯೊಂದು ಸಿಕ್ಕಿದ್ದು, ಅದರಲ್ಲಿ ರೈತರ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬರೆಯಲಾಗಿದೆ. ಈ ಪತ್ರವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.