ಅಯೋಧ್ಯೆ, ಡಿ.17 (DaijiworldNews/PY): "ಕೇಂದ್ರ ಸರ್ಕಾರದಿಂದ ನೀಡಲಾಗಿರುವ 5 ಎಕರೆ ಭೂಮಿಯಲ್ಲಿ ಬಾಬ್ರಿ ಮಸೀದಿಗೆ ಪರ್ಯಾಯವಾಗಿ ಮಸೀದಿ ನಿರ್ಮಿಸಲು ಗಣರಾಜ್ಯೋತ್ಸವ ದಿನದಂದು ಅಡಿಪಾಯ ಹಾಕಲಾಗುವುದು" ಎಂದು ಮಸೀದಿ ನಿರ್ಮಾಣಕ್ಕಾಗಿ ರಚಿಸಲಾದ ಟ್ರಸ್ಟ್ನ ಸದಸ್ಯರು ಹೇಳಿದ್ದಾರೆ.
ಪ್ರಾತಿನಿಧಿಕ ಚಿತ್ರ
"ಅಯೋಧ್ಯೆಯಲ್ಲಿ ಜ.26, 2021ರಂದು ಮಸೀದಿ ನಿರ್ಮಾಣಕ್ಕೆ ಅಡಿಪಾಯ ಹಾಕುವ ಕಾರ್ಯಕ್ರಮಕ್ಕೆ ಟ್ರಸ್ಟ್ ಸಮಯ ನಿಗದಿ ಮಾಡಿದೆ.ನಮ್ಮ ಸಂವಿಧಾನವು ಏಳು ದಶಕಗಳ ಹಿಂದೆ ಜಾರಿಗೆ ಬಂದಿದೆ. ನಮ್ಮ ಸಂವಿಧಾನವು ಬಹುತ್ವವನ್ನು ಆಧರಿಸಿದೆ. ಇದು ಮಸೀದಿ ಯೋಜನೆಯ ಪ್ರಮುಖ ಅಂಶವಾಗಿದೆ" ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಕಾರ್ಯದರ್ಶಿ ಅಥರ್ ಹುಸೇನ್ ಹೇಳಿದ್ದಾರೆ.
ಮಸೀದಿ ನಿರ್ಮಾಣಕ್ಕಾಗಿ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಅನ್ನು ಆರು ತಿಂಗಳ ಹಿಂದೆ ಸುನ್ನಿ ವಕ್ಫ್ ಮಂಡಳಿ ಸ್ಥಾಪಿಸಿತ್ತು.
ಡಿಸೆಂಬರ್ 19 ರಂದು ಐಐಸಿಎಫ್, ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯದ ಅಡುಗೆಮನೆ ಮತ್ತು ಗ್ರಂಥಾಲಯ ಒಳಗೊಂಡಿರುವ ಮಸೀದಿ ಸಂಕೀರ್ಣದ ನೀಲನಕ್ಷೆಯನ್ನು ಅನಾವರಣಗೊಳಿಸಲಿದೆ. ಮುಖ್ಯ ವಾಸ್ತುಶಿಲ್ಪಿ ಪ್ರೊಫೆಸರ್ ಎಸ್ ಎಂ ಅಖ್ತರ್ ಅವರು ಈ ಯೋಜನೆಯ ಪ್ಲಾನ್ ಅನ್ನು ಅಂತಿಮಗೊಳಿಸಿದ್ದಾರೆ.
"ದುಂಡಗಿನ ಆಕಾರದಲ್ಲಿ ನಿರ್ಮಾಣವಾಗಲಿರುವ ಮಸೀದಿಯಲ್ಲಿ ಏಕಕಾಲಕ್ಕೆ ಸುಮಾರು 2,000 ಮಂದಿ ನವಾಜ್ ಮಾಡುವಷ್ಟು ಸ್ಥಳಾವಕಾಶ ಇರಲಿದೆ" ಎಂದು ಅಖ್ತರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಕಳೆದ ವರ್ಷ ನ.9ರಂದು ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿತ್ತು. ಇದಾದ ನಂತರ ಮಸೀದಿ ನಿರ್ಮಾಣದ ಸಲುವಾಗಿ ಅಯೋಧ್ಯೆಯಲ್ಲಿ ಸುನ್ನಿ ವಕ್ಫ್ ಬೋರ್ಡ್ಗೆ ಐದು ಎಕರೆ ಭೂಮಿ ನೀಡುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು.