ಭುವನೇಶ್ವರ, ಡಿ.17 (DaijiworldNews/PY): ಕೊರೊನಾ ಐಸೋಲೇಷನ್ ಕೇಂದ್ರವಾಗಿ ಪರಿವರ್ತಿಸಿದ್ದ ರೈಲು ಬೋಗಿಯ ಮೇಲೇರಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ 13ರ ಬಾಲಕ ವಿದ್ಯುತ್ ತಂತಿಗೆ ಸಿಲುಕಿ ಸಜೀವ ದಹನವಾದ ಘಟನ ಡಿ.16ರ ಬುಧವಾರದಂದು ಒಡಿಶಾದ ಗಜಪತಿ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಪಿ.ಸೂರ್ಯ ಎನ್ನಲಾಗಿದೆ. ಆತನ ಇಬ್ಬರು ಸ್ನೇಹಿತರಿಗೆ ಸುಟ್ಟ ಗಾಯಗಳಾಗಿವೆ.
ಪಾರ್ಲಕೇಮುಂಡಿ ರೈಲ್ವೆ ನಿಲ್ದಾಣದಲ್ಲಿದ್ದ ರೈಲ್ವೆ ಬೋಗಿಯ ಮೇಲೆ ಪಿ. ಸೂರ್ಯ ಹಾಗೂ ಆತನ ಇಬ್ಬರು ಸ್ನೇಹಿತರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭ ವಿದ್ಯುತ್ ತಂತಿ ತಾಗಿದ್ದು, ಸೂರ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನ ಇಬ್ಬರು ಸ್ನೇಹಿತರಿಗೆ ಸುಟ್ಟಗಾಯಗಳಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಪರಿಣಾ ಬೋಗಿಯ ಛಾವಣಿಯೂ ಕೂಡಾ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ರೈಲಿನ ಬೋಗಿಗಳನ್ನು ಕೊರೊನಾ ಐಸೋಲೇಷನ್ ಕೇಂದ್ರವಾಗಿ ಪರಿವರ್ತಿಸಲಾಗಿತ್ತು. ಇವುಗಳನ್ನು ನಿಲ್ದಾಣದ ಎರಡನೇ ಮಾರ್ಗದಲ್ಲಿ ನಿಲ್ಲಿಸಲಾಗಿದ್ದು, ಈ ಬೋಗಿಗಳು ಮುಖ್ಯದ್ವಾರದಿಂದ ಸುಮಾರು 100 ಮೀ. ದೂರಲ್ಲಿದ್ದವು.
ಘಟನೆಯ ಬಗ್ಗೆ ತನಿಖೆ ನಡೆಸಲು ವಾಲ್ಟೇರ್ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಂದ ಕಿರಿಯ ಆಡಳಿತ ತಂಡವನ್ನು ರಚಿಸಿದೆ.