ಹುಬ್ಬಳ್ಳಿ,ಡಿ.17 (DaijiworldNews/HR): ಸಾಮಾಜಿಕ ಹೋರಾಟಗಾರ ಬಿ.ಡಿ. ಹಿರೇಮಠ ಅವರು ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ 14 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದು ಇದೀಗ ಅಸ್ವಸ್ಥಗೊಂಡು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಿಕಾರಿಪುರ ತಾಲ್ಲೂಕಿನ ಉಡಗಣಿ, ತಾಳಗುಂದ ಕೆರೆ ತುಂಬಿಸುವ ನೀರಾವರಿ ಯೋಜನೆಗೆ ಪೈಪ್ಲೈನ್ ಅಳವಡಿಸಲು ರೈತರ ಜಮೀನುಗಳ ಸ್ವಾಧೀನ ವಿರೋಧಿಸಿ ರಟ್ಟಿಹಳ್ಳಿಯಲ್ಲಿ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಹಿರೇಮಠ ಅವರು ಈ ಹೋರಾಟದ ನೇತೃತ್ವ ವಹಿಸಿದ್ದರು. ಉಪವಾಸ ಮಾಡಿದ್ದರಿಂದ ತೀರಾ ಅಸ್ವಸ್ಥರಾಗಿದ್ದಾರೆ.
ಆಸ್ಪತ್ರೆಯ ವಿಐಪಿ ವಾರ್ಡ್ನಲ್ಲಿ ಬಿ.ಡಿ. ಹಿರೇಮಠ ಅವರನ್ನು ದಾಖಲಿಸಲಾಗಿದ್ದು, ವೈದ್ಯಕೀಯ ಸಿಬ್ಬಂದಿ ರಕ್ತ ಪರೀಕ್ಷೆ ಹಾಗೂ ಬಿಪಿ ತಪಾಸಣೆ ಮಾಡಿದ್ದಾರೆ.
ಇನ್ನು ಗೃಹಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಬುಧವಾರ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ತೆರಳಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಕಾರಣ ಇದೀಗ ಉಪವಾಸ ಸತ್ಯಾಗ್ರಹ ಕೈ ಬಿಡಲಾಗಿದೆ.