ನವದೆಹಲಿ, ಡಿ.17 (DaijiworldNews/PY): "ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಿರುವ ಜೆಇಇ-ಮೆನ್ಸ್ ಪರೀಕ್ಷೆಯನ್ನು 2021ರಿಂದ ವರ್ಷಕ್ಕೆ ನಾಲ್ಕು ಬಾರಿ ನಡೆಸುವುದಾಗಿ" ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಘೋಷಿಸಿದ್ದಾರೆ.
"ಮೊದಲನೆಯ ಸುತ್ತು ಫೆ.23ರಿಂದ 26ರವರೆಗೆ ನಡೆಯಲಿದ್ದು, ಇನ್ನುಳಿದ ಸುತ್ತಿನ ಪರೀಕ್ಷೆಗಳು ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನಡೆಯಲಿವೆ.ಕೊನೆಯ ಪರೀಕ್ಷೆ ನಡೆದ ಐದು ದಿನಗಳೊಳಗಾಗಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು" ಎಂದು ತಿಳಿಸಿದ್ದಾರೆ.
"ನಾವು ವಿದ್ಯಾರ್ಥಿಗಳಿಂದ ಬಂದ ಸಲಹೆಗಳನ್ನು ಪರಿಶೀಲನೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ವರ್ಷಕ್ಕೆ ನಾಲ್ಕು ಬಾರಿ ಜೆಇಇ-ಮೆನ್ಸ್ ಪರೀಕ್ಷೆಯನ್ನು ನಡೆಸಲು ತೀರ್ಮಾನ ಕೈಗೊಂಡಿದ್ದೇವೆ" ಎಂದಿದ್ದಾರೆ.
"ಈ ತೀರ್ಮಾನದಿಂದ ವಿದ್ಯಾರ್ಥಿಗಳು ನಾನಾ ಕಾರಣಗಳಿಂದ ಪರೀಕ್ಷೆಯಿಂದ ವಂಚಿತರಾಗುವುದು ಕೂಡಾ ತಪ್ಪುತ್ತದೆ. 90 ಪ್ರಶ್ನೆಗಳಲ್ಲಿ 75 ಪ್ರಶ್ನೆಗಳಿಗೆ ಉತ್ತರಿಸುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು" ಎಂದು ಹೇಳಿದ್ದಾರೆ.