ನವದೆಹಲಿ,ಡಿ.17 (DaijiworldNews/HR): ಬಜರಂಗದಳದ ಮೇಲೆ ನಿಷೇಧ ಹೇರುವ ಯಾವುದೇ ಅಂಶಗಳು ಕಂಡುಬಂದಿಲ್ಲವೆಂದು ಸತ್ಯ ಪರಿಶೀಲನಾ ತಂಡವು ದೃಢಪಡಿಸಿದೆ ಎಂದು ಫೇಸ್ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ಹೇಳಿದ್ದಾರೆ.
ದೆಹಲಿಯ ಚರ್ಚ್ ಒಂದರ ಮೇಲೆ ಜೂನ್ ತಿಂಗಳಲ್ಲಿ ದಾಳಿ ನಡೆಸಿದ ವಿಡಿಯೊವನ್ನು ಬಜರಂಗದಳವು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ತಿಳಿದುಬಂದಿದ್ದರೂ, ಬಜರಂಗದಳವನ್ನು ನಿಷೇಧಿಸಲು ಫೇಸ್ಬುಕ್ ಹಿಂದೇಟು ಹಾಕಿತ್ತು.
ಇನ್ನು ನಾಗರಿಕರ ದತ್ತಾಂಶ ಸುರಕ್ಷತೆ ಬಗೆಗಿನ ವಿಚಾರಣೆಗೆ ಹಾಜರಾಗುವಂತೆ ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿಯು ಅಜಿತ್ ಮೋಹನ್ ಅವರಿಗೆ ಸೂಚಿಸಿದ್ದು,ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಂಸತ್ತಿನ ಮಾಹಿತಿ ತಂತ್ರಜ್ಞಾನ ಸಮಿತಿಯು ಬಜರಂಗದಳದ ವಿಚಾರವಾಗಿ ಫೇಸ್ಬುಕ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥರಿಗೆ ಪ್ರಶ್ನೆ ಮಾಡಿದೆ.
ಇದಕ್ಕೆ ಉತ್ತರಿಸಿದ ಅಜಿತ್ ಮೋಹನ್, "ಬಜರಂಗದಳದ ಪೋಸ್ಟ್ನಲ್ಲಿ ಯಾವುದೇ ವಿವಾದಾತ್ಮಕ ಅಂಶಗಳು ಕಂಡುಬಂದಿಲ್ಲ. ಆ ಕಾರಣ, ಸಂಘಟನೆಯನ್ನು ನಿಷೇಧಿಸಿಸುವ ಅನಿವಾರ್ಯತೆ ಫೇಸ್ಬುಕ್ ಇಂಡಿಯಾ ಕಂಪನಿಗೆ ಇರಲಿಲ್ಲವೆಂದು" ಹೇಳಿದ್ದಾರೆ.